- Home
- Karnataka Districts
- ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಸರ್ಕಾರದಿಂದ ಉತ್ಖನನ; ಚಾಲುಕ್ಯರ ಚಿನ್ನದ ಕೊಪ್ಪರಿಗೆ ಸಿಗುವ ಕುತೂಹಲ!
ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಸರ್ಕಾರದಿಂದ ಉತ್ಖನನ; ಚಾಲುಕ್ಯರ ಚಿನ್ನದ ಕೊಪ್ಪರಿಗೆ ಸಿಗುವ ಕುತೂಹಲ!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ಆರಂಭಿಸಿದೆ. ಇತ್ತೀಚೆಗೆ ಸ್ಥಳೀಯ ಕುಟುಂಬವೊಂದಕ್ಕೆ ನಿಧಿ ಸಿಕ್ಕ ಹಿನ್ನೆಲೆಯಲ್ಲಿ, ಚಾಲುಕ್ಯರ ಕಾಲದ ಟಂಕಸಾಲೆ, ಸುರಂಗ ಮಾರ್ಗ ಹಾಗೂ ಇನ್ನಷ್ಟು ಐತಿಹಾಸಿಕ ನಿಕ್ಷೇಪಗಳು ಪತ್ತೆಯಾಗುವ ಕುತೂಹಲ ಹೆಚ್ಚಾಗಿದೆ.

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ ಈ ಹಿಂದೆ ಕಲ್ಯಾಣಿ ಚಾಲುಕ್ಯರ ಪ್ರಸಿದ್ಧ ಪಟ್ಟಣವಾಗಿತ್ತು. ಇಲ್ಲಿನ ದೇವಸ್ಥಾನಗಳು ಅದಕ್ಕೆ ಸಾಕ್ಷಿಯಾಗಿವೆ. ಜೊತೆಗೆ, ಲಕ್ಕುಂಡಿಯಲ್ಲಿ ಚಾಲುಕ್ಯರ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳ ಟಂಕಸಾಲೆಯೂ ಲಕ್ಕುಂಡಿಯಲ್ಲಿತ್ತು. ಆಗಿನ ಕಾಲದ ನಾಣ್ಯಗಳು ಚಿನ್ನ, ಬೆಳ್ಳಿ ಹಾಗೂ ತಾಮ್ರ ಅಥವಾ ಕಂಚಿನ ನಾಣ್ಯಗಳಾಗಿರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಟಂಕಸಾಲೆಯಲ್ಲಿ ನಿರ್ಮಿಸಿ ಸಂಗ್ರಹಿಸಿದ ನಾಣ್ಯಗಳೇನಾದರೂ ಇಲ್ಲಿವೆಯೇ ಎಂಬ ಬಗ್ಗೆಯೂ ಹೆಚ್ಚು ಕುತೂಹಲವಿದೆ.
ಆದರೆ, ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡುವ ಉದ್ದೇಶವೇ ಬೇರೆಯಾಗಿದೆ. ಇಲ್ಲಿನ ದೇವಸ್ಥಾನಗಳಿಗೆ ಸುರಂಗ ಮಾರ್ಗವಿರುವುದು, ಗುಡಿ,ಗೋಪುರ ಇರುವುದು ಹಾಗೂ ಟಂಕಸಾಲೆಯ ಕುರುಹು ಏನಾದರೂ ಸಿಗಬಹುದೇ ಎಂದು ಉತ್ಖನನ ಮಾಡುವುದಕ್ಕೆ ಮುಂದಾಗಿದ್ದಾರೆ. ಚಾಲುಕ್ಯರ ಕಾಲದ ಶ್ರೀಮಂತ ಹಾಗೂ ಧಾರ್ಮಿಕ ಕ್ಷೇತ್ರವಾಗಿದ್ದ ಲಕ್ಕುಂಡಿಯಲ್ಲಿ ಇನ್ನೂ ಐತಿಹಾಸಿಕ ಕುರುಹು ಮಣ್ಣಿನಲ್ಲಿ ಹುದುಗಿರಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಆದ್ದರಿಂದ ಈ ಬಗ್ಗೆ ಉತ್ಖನನ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಕಳೆದ ವರ್ಷದ 2025ರ ಜೂ.25ರಂದೇ ಅನುಮೋದನೆ ಪಡೆದಿದ್ದರು.
ಉತ್ಖನನ ಕಾರ್ಯವನ್ನು ಮಳೆಗಾಲದಲ್ಲಿ ಮಾಡಲು ಬರುಯವುದಿಲ್ಲ. ಜೊತೆಗೆ, ಒಂದು ಕಟ್ಟಡವನ್ನು ಸ್ಥಳಾಂತರ ಮಾಡುವ ಕಾರ್ಯದ ನಿಮಿತ್ತ ಉತ್ಖನನ ಕಾರ್ಯ ವಿಳಂಬವಾಗಿತ್ತು. ಆದರೆ, ಇದೀಗ ಮಳೆಗಾಲ ಮುfಕತಾಯವಾಗಿದ್ದು, ಉತ್ಖನನ ಕಾರ್ಯಾರಂಭ ಮಾಡಬೇಕು ಎನ್ನುವಷ್ಟರಲ್ಲಿ ರಿತ್ತಿ ಕುಟುಂಬದವರಿಗೆ ನಿಧಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಉತ್ಖನನ ಮಾಡುವ ಜಾಗದಲ್ಲಿಯೂ ನಿಧಿ, ಬಂಗಾರದ ನಾಣ್ಯಗಳು ಅಥವಾ ಬೇರಾವುದೇ ಚಿನ್ನದ ನಿಕ್ಷೇಪಗಳು ಸಿಗುತಗ್ತವೆ ಎಂಬ ನಿರೀಕ್ಷೆ ಜನರಲ್ಲಿ ಹೆಚ್ಚಾಗಿದೆ.
ಇದೀಗ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಯ ನೇತೃತ್ವದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಇದಕ್ಕೆ ಪೂರ್ವವಾಗಿ ಕೈಗೊಳಗಳಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂದೆ ಉತ್ಖನನ ಕಾರ್ಯ ಆರಂಭವಾಗಲಿದೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಉತ್ಖನನಕ್ಕೆ ಗದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಚಾಲನೆ ನೀಡಿದರು. ಇಲ್ಲಿನ ಗಾರೆಗೆ ಪೂಜೆ ಸಲ್ಲಿಸಿ, ಉತ್ಖನನಕ್ಕೆ ಚಾಲನೆ ನೀಡಿದ್ದು, ಸ್ಥಳೀಯ ಜನರಿಗೆ ಚಿನ್ನ, ನಿಕ್ಷೇಪ ಹಾಗೂ ನಾಣ್ಯಗಳು ಸಿಗುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ, ಅಧಿಕಾರಿಗಳಿಗೂ ಕುತೂಹಲ ಹೆಚ್ಚಾಗಿದ್ದು, ಎಲ್ಲವನ್ನೂ ಪಾರದರ್ಶಕವಾಗಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಜನರೂ ಕೂಡ ಎಲ್ಲವೂ ಗ್ರಾಮಸ್ಥರ ಕಣ್ಣೆದುರಿಗೇ ನಡೆಯಬೇಕು ಎಂದು ಮನವಿ ಮಾಡಿದ್ದು, ಗ್ರಾಮದ ಜನರು ಅಲ್ಲಿ ಜಮಾಯಿಸಿದ್ದಾರೆ.
ಈ ಉತ್ಖನನ ಜಾಗವು ಕಳೆದೊಂದು ವಾರದಲ್ಲಿ ಮನೆ ಪಾಯ ಅಗೆಯುವಾಗ ರಿತ್ತಿ ಕುಟುಂಬಕ್ಕೆ ನಿಧಿ ಸಿಕ್ಕ ಸ್ಥಳದಿಂದ ಕೇವಲ 250 ಮೀ. ದೂರದಲ್ಲಿದೆ. ಹೀಗಾಗಿ, ಎಲ್ಲರ ಚಿತ್ತ ಲಕ್ಕುಂಡಿಯ ಉತ್ಖನನದತ್ತ ಮೂಡಿದೆ. ಇನ್ನು ಈ ಶೋಧ ಕಾರ್ಯದಲ್ಲಿ ಸುಮಾರು 50 ಹೆಚ್ಚು ಕೆಲಸಗಾರರು ಭಾಗಿಯಾಗಲಿದ್ದಾರೆ.

