- Home
- Karnataka Districts
- ಲಕ್ಷಕ್ಕೆ ₹30 ಸಾವಿರ ಆಮಿಷವೊಡ್ಡಿ ₹2.68 ಕೋಟಿ ದೋಚಲು ಪ್ಲಾನ್! ಮಾಜಿ ಸಚಿವರ ಗನ್ಮ್ಯಾನ್ ಹಾಕಿದ್ದ ಸ್ಕೆಚ್ ಗೆ ಬೆಚ್ಚಿಬಿದ್ದ ಬೆಳಗಾವಿ!
ಲಕ್ಷಕ್ಕೆ ₹30 ಸಾವಿರ ಆಮಿಷವೊಡ್ಡಿ ₹2.68 ಕೋಟಿ ದೋಚಲು ಪ್ಲಾನ್! ಮಾಜಿ ಸಚಿವರ ಗನ್ಮ್ಯಾನ್ ಹಾಕಿದ್ದ ಸ್ಕೆಚ್ ಗೆ ಬೆಚ್ಚಿಬಿದ್ದ ಬೆಳಗಾವಿ!
ಬೆಳಗಾವಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ಕುರಬೇಟ್ ಹಣ ಡಬ್ಲಿಂಗ್ ಆಮಿಷವೊಡ್ಡಿ 2.68 ಕೋಟಿ ರೂ ದರೋಡೆಗೆ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಚಿದಾನಂದ ಸೇರಿದಂತೆ ಏಳು ಜನರನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಸಿನಿಮಾ ಸ್ಟೈಲ್ ದರೋಡೆಗೆ ಪ್ಲಾನ್!
ಕೈಯಲ್ಲಿ ಬಂದೂಕು ಹಿಡಿದು ಜನಪ್ರತಿನಿಧಿಗಳ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಸಿಬ್ಬಂದಿಯೇ ಕೋಟ್ಯಂತರ ರೂಪಾಯಿ ದರೋಡೆಗೆ ಸಂಚು ರೂಪಿಸಿದ್ದ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹಣ ಡಬ್ಲಿಂಗ್ ಆಮಿಷೆ ತೋರಿಸಿ ಬರೋಬ್ಬರಿ 2.68 ಕೋಟಿ ರೂಪಾಯಿ ದೋಚಲು ಸಿನಿಮಾ ಸ್ಟೈಲ್ನಲ್ಲಿ ಸ್ಕೆಚ್ ಹಾಕಿದ್ದ ದರೋಡೆಕೋರರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ಕುರಬೇಟ್!
ಮಾಜಿ ಸಚಿವನ ಗನ್ಮ್ಯಾನ್ನಿಂದಲೇ ದರೋಡೆಗೆ ಪ್ಲಾನ್!
ಹೌದು. ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದಿರೋ ಈ ಶಾಕಿಂಗ್ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದವರಾದ ಚಿದಾನಂದ ಕುರಬೇಟ್, ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಗನ್ ಮ್ಯಾನ್ ಆಗಿದ್ದವರು ಎನ್ನಲಾಗಿದೆ. ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಮೂಡಲಗಿ ಪಟ್ಟಣದವರೇ ಆದ ಕಲ್ಮೇಶ ರಂಗಾಪೂರ ಎಂಬುವವರಿಗೆ ಆಮಿಷವೊಡ್ಡಿದ್ದ. ಪ್ರತಿ ಒಂದು ಲಕ್ಷ ರೂಪಾಯಿಗೆ 30 ಸಾವಿರ ರೂಪಾಯಿ ಹೆಚ್ಚು ಹಣ ನೀಡುವುದಾಗಿ ನಂಬಿಸಿದ್ದ. ಗನ್ಮ್ಯಾನ್ ಚಿದಾನಂದ ಮಾತು ನಂಬಿದ ಕಲ್ಮೇಶ ಡಬಲ್ ಹಣದ ಆಸೆಗೆ ಬಿದ್ದು ತನ್ನ ಸಂಬಂಧಿಕರು, ಸ್ನೇಹಿತರು ಬಳಿ ಸಾಲ ಪಡೆದು ಬರೋಬ್ಬರಿ 2.68 ಕೋಟಿ ರೂಪಾಯಿ ಒಟ್ಟುಗೂಡಿಸಿದ್ದರು!
ಅ.30ರಂದು ಹಣ ಎಣಿಸಲು ಕರೆದಿದ್ದ ಗನ್ಮ್ಯಾನ್!
ೋಟ್ಯಂತರ ರೂಪಾಯಿ ಹಣ ಸಂಗ್ರಹವಾಗುತ್ತಿದ್ದಂತೆ ಈ ವಿಷಯ ಗೊತ್ತಾಗಿ ದರೋಡೆಗೆ ಸಂಚು ರೂಪಿಸಿತ್ತು ಚಿದಾನಂದ ಗ್ಯಾಂಗ್. ಅದರಂತೆಯೇ ಅಕ್ಟೋಬರ್ 30ರಂದು ಹಣ ಎಣಿಸೋ ನೆಪದಲ್ಲಿ ಮೂಡಲಗಿ ಪಟ್ಟಣದ ಹೊರವಲಯದಲ್ಲಿರುವ ಶೆಡ್ಗೆ ಕಲ್ಮೇಶ ಅವರನ್ನ ಬರುವಂತೆ ಗ್ಯಾಂಗ್ ಹೇಳಿತ್ತು. ದುಪ್ಪಟ್ಟು ಹಣದಾಸೆಗೆ ಕೋಟ್ಯಂತರ ರೂಪಾಯಿ ಹಣದೊಂದಿಗೆ ಬಂದಿದ್ದ ಕಲ್ಮೇಶ.
ಸುಮ್ಮನೆ ಬಂದಿರಲಿಲ್ಲ. ಸಿನಿಮಾ ಸ್ಟೈಲ್ನಲ್ಲಿ ಕಲ್ಮೇಶನೂ ತನ್ನದೆ ಪಡೆ ಕಟ್ಟಿಕೊಂಡು ಬಂದಿದ್ದ! ಏಕೆಂದರೆ ಗನ್ಮ್ಯಾನ್ ಚಿದಾನಂದನ ಬುದ್ಧಿ ಗೊತ್ತಿದ್ದ ಕಲ್ಮೇಶ್ ಹಣದ ವ್ಯವಹಾರದಲ್ಲಿ ಸುಲಭವಾಗಿ ನಂಬಿರಲಿಲ್ಲ. ಮುಂದೆ ಯಾವುದೇ ಅಪಾಯ ಎದುರಾಗದಂತೆ ಶೆಡ್ ಸುತ್ತಲೂ ತಮ್ಮ ಹುಡುಗರನ್ನು ಕಾವಲಿಗೆ ಇಟ್ಟಿದ್ದ ಆಸಾಮಿ!
ಗನ್ಮ್ಯಾನ್ ಚಿದಾನಂದ ಸೇರಿ ಏಳು ಮಂದಿ ಅರೆಸ್ಟ್!
ಅಂದು ಹಣ ಎಣಿಸುವ ಶೆಡ್ಗೆ ಚಿದಾನಂದ ತನ್ನ ಮಾವನನ್ನೂ ಕರೆದುಕೊಂಡು ಹೋಗಿದ್ದ. ಇದೇ ವೇಳೆ ಚಿದಾನಂದ ತಂಡದ ದರೋಡೆ ಗ್ಯಾಂಗ್ ಶೆಡ್ ಮೇಲೆ ದಾಳಿ ನಡೆಸಿದೆ. ಆದರೆ ಇಂಥದ್ದೊಂದು ದಾಳಿ ನಡೆದೀತು ಎನ್ನುವ ಬಗ್ಗೆ ಮುಂಚೆನೇ ಅಲರ್ಟ್ ಆಗಿದ್ದ ಕಲ್ಮೇಶನ ತಂಡ ದಾಳಿ ನಡೆಸಿದವರನ್ನೇ ಬಡಿದು ಹಿಡಿದು ಪೊಲೀಸರಿಗೊಪ್ಪಿಸಿತ್ತು! ಹೀಗೆ ಸಿನಿಮಾ ಸ್ಟೈಲ್ನಲ್ಲಿ ದರೋಡೆಗೆ ಪ್ಲಾನ್ ಮಾಡಿದ್ದ ಚಿದಾನಂದ ಗ್ಯಾಂಗ್ ಟೀಂ ಸಂಚು ವಿಫಲಗೊಂಡಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಖಾಕಿ ಹಿಂದಿನ ಖತರ್ನಾಕ್ ಆಟ ಬಯಲಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ಕುರಬೇಟ್ ಸೇರಿದಂತೆ ಸಂಜೀವ್ ಅರಭಾವಿ, ರಾಜಾರಾಮ್ ಮಾಳ್ಯಾಗೋಳ, ರಮೇಶ್ ಮಾಳ್ಯಾಗೋಳ, ಪ್ರಕಾಶ ಮೆಳವಂಕಿ, ರಾಘವೇಂದ್ರ ಕೊಪ್ಪದ್ ಮತ್ತು ರಾಮಪ್ಪ ತಳವಾರ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಮಾರುತಿ ಅರಭಾವಿ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಂಧಿತರಿಂದ 2.39 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಹಣ ಹಾಗೂ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಆರೋಪಿ ಚಿದಾನಂದನನ್ನು ಎಸ್ಪಿ ಕೆ. ರಾಮರಾಜನ್ ಅಮಾನತುಗೊಳಿಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿಗೂ ಪ್ರಕರಣಕ್ಕೂ ಸಂಬಂಧವಿಲ್ಲ!
ಇನ್ನು ಈ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸ್ಪಿ ಕೆ. ರಾಮರಾಜನ್ ಸ್ಪಷ್ಟನೆ ನೀಡಿದ್ದಾರೆ. ದರೋಡೆ ಪ್ರಕರಣಕ್ಕೂ ಶಾಸಕ ರಮೇಶ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನರ ರಕ್ಷಣೆ ಮಾಡಬೇಕಿದ್ದ ಗನ್ಮ್ಯಾನ್ನಿಂದಲೇ ಕೋಟ್ಯಂತರ ರೂಪಾಯಿ ದರೋಡೆಗೆ ಸಂಚು ರೂಪಿಸಿದ ಆರೋಪ ಕೇಳಿಬಂದಿರುವುದು ಮೂಡಲಗಿಯಲ್ಲಿ ಸಂಚಲನ ಮೂಡಿಸಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ತನಿಖೆ ಮುಂದುವರಿದಿದೆ.












