'ಆರ್‌ಎಸ್‌ಎಸ್‌ನಿಂದ ಕುರುಬ ಸಮಾಜದ ಒಗ್ಗಟ್ಟು ಒಡೆಯುವ ಕುತಂತ್ರ'
ರಾಯಚೂರು(ಜ.13): ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಕುರುಬ ಸಮಾಜದ ಒಗ್ಗಟ್ಟನ್ನು ಒಡೆಯುವ ಕುತಂತ್ರ ಹೂಡಿರುವ ಆರ್‌ಎಸ್‌ಎಸ್, ಹೋರಾಟದ ಹಿಂದೆ ರಾಜಕೀಯ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದೇವದುರ್ಗ ತಾಲೂಕಿನ ತಿಂಥಿಣಿ ಕನಕಗುರುಪೀಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದ ಸಿದ್ದರಾಮಯ್ಯ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ನಡೆಸುತ್ತಿದ್ದು, ಕೆ.ಎಸ್.ಈಶ್ವರಪ್ಪ ಅವರು ರಾಜ್ಯ ಸರ್ಕಾರದ ಸಚಿವರಾಗಿದ್ದಾರೆ. ಅವರೇ ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸು ಮಾಡಲಿ. ಎಸ್ಟಿ ಹೋರಾಟ ನಡೆಸುತ್ತಿರುವ ಈಶ್ವರಪ್ಪ ಅವರು ಯಾರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ? ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧವೋ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದರು.
ರಾಜ್ಯದಲ್ಲಿ ಕುರುಬ ಸಮಾಜವನ್ನು ಒಡೆಯುವುದಕ್ಕಾಗಿ ಎಸ್ಟಿ ಮೀಸಲಾತಿ ಹೋರಾಟವನ್ನು ರೂಪಿಸಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದ್ದು, ಇದರ ಹಿಂದೆ ಆರ್‌ಎಸ್‌ಎಸ್ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಕುತಂತ್ರಗಳು ಫಲಿಸುವುದಿಲ್ಲ. ಇದರಿಂದ ಬಿಜೆಪಿಗೂ ಯಾವುದೇ ರೀತಿಯ ಅನುಕೂಲವೂ ಆಗುವುದಿಲ್ಲ ಎಂದು ಹೇಳಿದರು.
ಈಶ್ವರಪ್ಪ ಅವರು ಇದೀಗ ಅಧಿಕಾರದಲ್ಲಿದ್ದಾರೆ. ಸಂಬಂಧಿಸಿದ ನಿರ್ದೇಶಕರನ್ನು ಕರೆಯಿಸಿ ಕುಲಶಾಸ್ತ್ರದ ಅಧ್ಯಯನ ವರದಿ ತರಿಸಿಕೊಂಡು ಮೀಸಲಾತಿ ಒದಗಿಸಲಿ. ಕುರುಬರ ಎಸ್ಟಿಹೋರಾಟಕ್ಕೆ ಯಾವುದೇ ಸಂದರ್ಭದಲ್ಲಿಯೂ ನಾನು ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಹೋರಾಟದ ನೆಪದಲ್ಲಿ ಕುರುಬ ಸಮುದಾಯದ ಒಗ್ಗಟ್ಟನ್ನು ಹಾಳುಮಾಡುವ ಆರ್‌ಎಸ್‌ಎಸ್‌ನ ಕುತಂತ್ರದ ಕುರಿತು ಎಚ್ಚರಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.