- Home
- Karnataka Districts
- ಭದ್ರಾವತಿಯಲ್ಲಿ ಅಪ್ಪು, ಅಣ್ಣಾವ್ರಿಗೆ ದೇಗುಲ ನಿರ್ಮಿಸಿದ ಅಭಿಮಾನಿಗಳು; ಅಶ್ವಿನಿ ಪುನೀತ್ ರಾಜ್ ಕುಮಾರ್ ಲೋಕಾರ್ಪಣೆ!
ಭದ್ರಾವತಿಯಲ್ಲಿ ಅಪ್ಪು, ಅಣ್ಣಾವ್ರಿಗೆ ದೇಗುಲ ನಿರ್ಮಿಸಿದ ಅಭಿಮಾನಿಗಳು; ಅಶ್ವಿನಿ ಪುನೀತ್ ರಾಜ್ ಕುಮಾರ್ ಲೋಕಾರ್ಪಣೆ!
ಭದ್ರಾವತಿಯಲ್ಲಿ ಅಭಿಮಾನಿಗಳು ನಿರ್ಮಿಸಿದ ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಗಳಿರುವ ದೇಗುಲವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲೋಕಾರ್ಪಣೆ ಮಾಡಿದರು. ಈ ದೇಗುಲದಲ್ಲಿ, ಇಬ್ಬರು ನಟರಿಗೆ ವರ್ಷಪೂರ್ತಿ ಪೂಜೆ ಸಲ್ಲಿಸಲು ಅಭಿಮಾನಿಗಳು ಸಂಕಲ್ಪ ಮಾಡಿದ್ದಾರೆ.

ಉಕ್ಕಿನ ನಗರಿ ಭದ್ರಾವತಿಯಲ್ಲಿ ಅಭಿಮಾನಿಗಳಿಂದ ವರನಟ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ನಿರ್ಮಿಸಿದ ಕಂಚಿನ ಪ್ರತಿಮೆ ಹಾಗೂ ದೇಗುಲವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲೋಕಾರ್ಪಣೆ ಮಾಡಿದರು. 35 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ದೇಗುಲ ಮತ್ತು ಪ್ರತಿಮೆಗಳ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದರು.
ಶಿವಮೊಗ್ಗ ಜಿಲ್ಲೆಯ ಉಕ್ಕಿನ ನಗರಿ ಎಂದೇ ಪ್ರಸಿದ್ಧವಾದ ಭದ್ರಾವತಿಯಲ್ಲಿ ಇಂದು ಸಂಭ್ರಮವು ಸಂಭ್ರಮ. ಕರ್ನಾಟಕದಲ್ಲಿ ಮನೆ ಮಾತಾಗಿರುವ ವರನಟ ಡಾ. ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳು ಅಭಿಮಾನದಿಂದ ಕಟ್ಟಿದ ರಾಜ್ಯದ ಮೊಟ್ಟ ಮೊದಲ ದೇಗುಲದ ಲೋಕಾರ್ಪಣೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು.
ಭದ್ರಾವತಿ ನಗರದ ರೈಲು ನಿಲ್ದಾಣ ಬಳಿಯ ಚಾಮೇಗೌಡ ಬಡಾವಣೆಯಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ತಲಾ ಮೂರು ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಿ ನಿರ್ಮಿಸಿದ ದೇಗುಲವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲೋಕಾರ್ಪಣೆ ಮಾಡಿದರು.
ಅತ್ಯಂತ ಸುಂದರವಾದ ವರನಟ ಹಾಗೂ ಪವರ್ ಸ್ಟಾರ್ ಕಂಚಿನ ಪ್ರತಿಮೆಯನ್ನು ಶಿವಮೊಗ್ಗದ ಮಲಗೊಪ್ಪದ ಶಿಲ್ಪಿ ವಿಷ್ಣು ಸುಂದರವಾಗಿ ಕೆತ್ತಿದ್ದಾರೆ.ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಕಂಚಿನ ಪ್ರತಿಮೆಗಳಿಗೆ ತಲಾ 5 ಲಕ್ಷ ವೆಚ್ಚದಲ್ಲಿ ಕೆತ್ತಲಾಗಿದ್ದು ದೇಗುಲ ನಿರ್ಮಾಣಕ್ಕೆ 25 ಲಕ್ಷ ರೂ ವೆಚ್ಚ ಸೇರಿದಂತೆ ಒಟ್ಟು 35 ಲಕ್ಷ ರೂ ವೆಚ್ಚದಲ್ಲಿ ದೇಗುಲ ಮತ್ತು ಪ್ರತಿಮೆಗಳ ನಿರ್ಮಾಣ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಭದ್ರಾವತಿಯ ಜನತೆಗೆ ಅನಂತ ಧನ್ಯವಾದಗಳು ಎಂದು ತಮ್ಮ ಎರಡೇ ಮಾತುಗಳ ಮೂಲಕ ಮಿತ ಬಾ ಭಾಷಣ ಮುಗಿಸಿದರೆ ಶಾಸಕ ಸಂಗಮೇಶ್ ಸಹೋದರ ಮಾಜಿ ನಗರಸಭಾ ಅಧ್ಯಕ್ಷ ಮೋಹನ್ ಪುನೀತ್ ರಾಜಕುಮಾರ್ ನೆನೆದು ಕಂಬನಿ ಗೆರೆದರು.
ಒಟ್ಟಿನಲ್ಲಿ ಭದ್ರಾವತಿಯಲ್ಲಿ ವರನಟ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಮೆಗಳ ಅನಾವರಣದೊಂದಿಗೆ ವರ್ಷಪೂರ್ತಿ ಪೂಜೆ ನಡೆಯುವ ಹಾಗೂ ಪುನೀತ್ ರಾಜಕುಮಾರ್ ರವರಂತೆ ಕಷ್ಟದಲ್ಲಿದ್ದವರಿಗೆ ನೆರವಿನ ಸಹಾಯದಿಂದ ನೀಡುವ ಸಂಕಲ್ಪ ಅಭಿಮಾನಿಗಳು ಮಾಡಿದ್ದು ವಿಶೇಷವಾಗಿತ್ತು.
ವರದಿ- ರಾಜೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್

