Koppal: ಪರಿಹಾರ ನೀಡದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಪೋ ಬಸ್ ಜಪ್ತಿ
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಕೂಡ್ಲಿಗಿಯಲ್ಲಿ ಜಪ್ತಿ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಜಪ್ತಿ
ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ, ಪರಿಹಾರ ನೀಡದ ಕಾರಣ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಂತ್ರಸ್ತರ ಪರ ವಕೀಲರ ಜೊತೆಗೆ ನ್ಯಾಯಾಲಯದ ಸಿಬ್ಬಂದಿ ಬಸ್ ಜಪ್ತಿ ಮಾಡಿದ ಘಟನೆ ಕೂಡ್ಲಿಗಿ ನಡೆದಿದೆ.
ಸಾರಿಗೆ ಬಸ್ ಡಿಕ್ಕಿಯಾಗಿ ಸಾವು
2019 ನವಂಬರ್ 10ರಂದು ಕೂಡ್ಲಿಗಿ ತಾಲೂಕಿನ ಕ್ಯಾಸನಕೇರಿ ಗ್ರಾಮದ ನಾಗಪ್ಪ (55) ಟಾಟಾ ಏಸ್ ಆಟೋದಲ್ಲಿ ಹೊಸಪೇಟೆ ಯಿಂದ ಕೂಡ್ಲಿಗಿ ಕಡೆ ಬರುತ್ತಿದ್ದರು. ಶಿವಪುರ ಗ್ರಾಮದ ಬಳಿ ಕೂಡ್ಲಿಗಿಯಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ಕೊಪ್ಪಳ ಡಿಪೋಗೆ ಸೇರಿದ ಸಾರಿಗೆ ಬಸ್ ಡಿಕ್ಕಿ ಹೊಡೆದಿತ್ತು.
ಪರಿಹಾರ ನೀಡುವಂತೆ ಆದೇಶ
ಅಪಘಾತದಲ್ಲಿ ಆಟೋದಲ್ಲಿದ್ದ ಕ್ಯಾಸನಕೇರಿ ಮೂಲದ ನಾಗಪ್ಪ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಕೊಟ್ರಮ್ಮ ಅವರು ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು
ಬಸ್ ಜಪ್ತಿಗೆ ಆದೇಶ
ನ್ಯಾಯಾಲಯದ ಆದೇಶದ ಹೊರತಾಗಿಯೂ ಸಾರಿಗೆ ಸಂಸ್ಥೆಯು ಪರಿಹಾರ ಧನ ನೀಡಲು ವಿಳಂಬ ಮಾಡಿತ್ತು. ಇದರಿಂದ ಆಕ್ರೋಶಗೊಂಡ ನ್ಯಾಯಾಲಯವು ಬಸ್ ಜಪ್ತಿ ಮಾಡಲು ಅಂತಿಮ ಆದೇಶ ಹೊರಡಿಸಿತು. ನ್ಯಾಯಾಲಯದ ನಿರ್ದೇಶನದಂತೆ ಅಧಿಕಾರಿಗಳು ಬಸ್‌ಅನ್ನು ವಶಕ್ಕೆ ಪಡೆದಿದ್ದಾರೆ.

