ಸಚಿವ ಬೊಮ್ಮಾಯಿ ಮನೆ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರ
ಶಿಗ್ಗಾಂವಿ(ಮೇ.14): ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಕೋವಿಡ್ ಸೋಂಕಿತರ ಜೀವ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಪ್ರಾಥಮಿಕ ವೈದ್ಯೋಪಚಾರ ಒದಗಿಸಲು ಶಿಗ್ಗಾಂವಿಯ ತಮ್ಮ ಮನೆಯ ಆವರಣವನ್ನು ಕೋವಿಡ್ ಅರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸಲಾಗಿದೆ. 50 ಹಾಸಿಗೆಗಳನ್ನು ಅಳವಡಿಸಲಾಗಿದೆ. ಗುರುವಾರ ಸ್ಥಳಕ್ಕೆ ಸಚಿವ ಬೊಮ್ಮಾಯಿ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಡ್‌ಗಳನ್ನು ಸಿದ್ಧಪಡಿಸಬೇಕಾಗಿದೆ. ಆದ್ದರಿಂದ ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ತಕ್ಷಣ 46 ಹೆಚ್ಚುವರಿ ಬೆಡ್‌ಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ ಬೊಮ್ಮಾಯಿ
ಉಸಿರಾಟದ ಸಮಸ್ಯೆಯಿಂದ ಬಳಲುವ ಕೋವಿಡ್ ಸೋಂಕಿತರ ಪ್ರಾಣ ಕಾಪಾಡುವ 25 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಗೆ ಸಚಿವ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಿದರು.
ಸವಣೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಸವಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 20 ಹಾಸಿಗೆಗಳನ್ನು ಸಿದ್ಧಪಡಿಸಿ. ಮುಂದಿನ ನಾಲ್ಕು ದಿನಗಳಲ್ಲಿ 25 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಸವಣೂರು ಆಸ್ಪತ್ರೆಗೆ ಕಳುಹಿಸಲಾಗುವುದು ಎಂದ ಬಸವರಾಜ ಬೊಮ್ಮಾಯಿ
ಆರಂಭದಲ್ಲಿ ಕೋವಿಡ್ ಸಮಸ್ಯೆ ಅಷ್ಟು ಕಂಡುಬರುವುದಿಲ್ಲ. ಆದರೆ ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆಯೇ ರೋಗಿಯ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಉಂಟಾಗಲು ಆರಂಭವಾಗುತ್ತದೆ. ಆದ್ದರಿಂದ ಅಂಥವರಿಗೆ ತಕ್ಷಣ ಆಕ್ಸಿಜನ್ ನೀಡಬೇಕಾದ ಅಗತ್ಯ ಎದುರಾಗುತ್ತದೆ. ಅಂಥವರಿಗಾಗಿಯೇ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ವಿತರಿಸಲಾಗುತ್ತಿದೆ. ಸಮಯೋಚಿತವಾಗಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಮೂಲಕ ಅವರ ಜೀವರಕ್ಷಣೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಸವಣೂರಿನ ವೈದ್ಯಾಧಿಕಾರಿ ಹಿರೇಗೌಡರ, ರಾಜಶೇಖರ ಮೂಲಿಮನಿ ಇದ್ದರು. ಜಿಪಂ ಸಿಇಒ ಮಹ್ಮದ್ ರೋಷನ್, ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಇದ್ದರು.