ರಾಯಚೂರು: ಸೋಂಕಿತರಿಗೆ ಫ್ರೀ ಊಟ, ಫೋನ್ ಮಾಡಿದ್ರೆ ಮನೆಗೆ ಬರುತ್ತೆ ಶುಚಿಯಾದ ಆಹಾರ..!
ರಾಯಚೂರು(ಮೇ.08): ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ, ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಶುಚಿಯಾದ ಊಟ ತಲುಪಿಸುವ ಕೆಲಸವನ್ನು ನಗರದ ಮುರುಳಿಕೃಷ್ಣ, ನಾಗಶ್ರಾವಂತಿ ದಂಪತಿ ಮಾಡುತ್ತಿದ್ದಾರೆ.
ಮುರುಳಿಕೃಷ್ಣ, ನಾಗಶ್ರಾವಂತಿ ದಂಪತಿ ಕಳೆದ ಏ. 24 ರಂದು ಉಚಿತ ಊಟ, ಉಪಹಾರ ಸೇವೆ ಆರಂಭಿಸಿದಾಗ 20 ಜನ ಸೋಂಕಿತರು ಇವರಿಂದ ನೆರವು ಪಡೆಯಲಾರಂಭಿಸಿದ್ದರು. ಇದೀಗ 50 ಕ್ಕೂ ಹೆಚ್ಚು ಜನರಿಗೆ ಪ್ರತಿನಿತ್ಯ ಊಟ, ಉಪಹಾರ ತಲುಪುತ್ತಿದೆ. ಮುಖ್ಯವಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಬೇರೆ ಊರಿನ ಕೋವಿಡ್ ರೋಗಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ.
ಕೋವಿಡ್ ದೃಢಪಟ್ಟವರ ಕಾಳಜಿ ವಹಿಸುವುದಕ್ಕೆ ಸಂಬಂಧಿಗಳೇ ಹಿಂದೇಟು ಹಾಕುತ್ತಾರೆ. ಅದರಲ್ಲೂ ಹಿರಿಯ ವಯಸ್ಸಿನವರ ಬಗ್ಗೆ ತಾತ್ಸಾರ ಹೆಚ್ಚುತ್ತಿದೆ. ರೋಗಿಗಳಿಗೆ ಸರಿಯಾಗಿ ಊಟ, ಉಪಹಾರ ದೊರೆತರೆ ಖಂಡಿತ ಚೇತರಿಸಿಕೊಳ್ಳುತ್ತಾರೆ. ಹಣ ಇದ್ದರೂ ಅದರಿಂದ ಅನುಕೂಲ ಮಾಡಿಕೊಳ್ಳದಂತಹ ಪರಿಸ್ಥಿತಿಯಲ್ಲಿ ಬಹಳಷ್ಟು ರೋಗಿಗಳಿದ್ದಾರೆ. ಬೇರೆ ಊರಿನಿಂದ ಚಿಕಿತ್ಸೆಗಾಗಿ ಬಂದವರಿಗೆ ಸರಿಯಾಗಿ ಊಟ ಸಿಗುವುದೇ ಇಲ್ಲ. ಈ ಕಷ್ಟ ಎಂಥದ್ದು ಎನ್ನುವುದು ನಮಗೆ ಗೊತ್ತಿರುವುದರಿಂದ ಈ ಸೇವೆಯನ್ನು ಒಂದು ತಿಂಗಳುಮಟ್ಟಿಗೆ ಮಾಡಲು ನಿರ್ಧರಿಸಿ ಆರಂಭಿಸಿದ್ದೇವೆ ಎಂದು ಮುರುಳಿಕೃಷ್ಣ ಹೇಳಿದ್ದಾರೆ.
ರಾಯಚೂರಿನ ಐಶ್ಚರ್ಯ ರೈಸ್‌ಮಿಲ್ ಹೊಂದಿರುವ ವೇಮುಲ್ ಮುರುಳಿಕೃಷ್ಣ ಅವರು ಇಂಥದ್ದೊಂದು ಸೇವೆ ಆರಂಭಿಸಲು ಮುಖ್ಯ ಕಾರಣ; ಕಳೆದ ವರ್ಷ ಕೊರೋನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ಅವರ ತಂದೆ ವೇಮುಲ ಮಧುಸೂಧನ್ ಗುಪ್ತಾ ಅವರು ಅನುಭವಿಸಿದ್ದ ಸಂಕಷ್ಟ.
ಕಳೆದ ವರ್ಷ ಕೊರೋನಾ ಸೋಂಕು ಹರಡಿದ್ದ ದಿನಗಳಲ್ಲಿ ಕರ್ನೂಲ್‌ನಿಂದ ವಾಪಸಾಗಿದ್ದ ತಂದೆ ಮಧಸೂಧನ್ ಅವರನ್ನು ಮನೆಗೆ ಸೇರಿಸಿಕೊಳ್ಳದ ಸ್ಥಿತಿ ನಿರ್ಮಾಣವಾಗಿತ್ತು.
ನೆರೆಹೊರೆಯವರ ಒತ್ತಾಯದಿಂದ ಅವರು ಪ್ರತ್ಯೇಕವಾಗಿ ಉಳಿದರು. ಅವರಿಗೆ ಮನೆಯಿಂದ ಊಟ, ಉಪಹಾರ ತಲುಪಿಸಲು ಆತಂಕ ಪಡಬೇಕಾದ ಸ್ಥಿತಿ ಉದ್ಭವವಾಗಿತ್ತು. ಇಂಥ ಸಂಕಷ್ಟದ ಸ್ಥಿತಿ ಬಹುತೇಕ ಕೋವಿಡ್ ಸೋಂಕಿತರೆಲ್ಲ ಅನುಭವಿಸುತ್ತಾರೆ ಎಂಬುದನ್ನು ಅರಿತು, ಈ ಸೇವೆ ಮಾಡುತ್ತಿದ್ದೇವೆ. ಇದನ್ನು ಮಾದರಿಯಾಗಿಟ್ಟುಕೊಂಡು ಕೆಲವು ಸ್ನೇಹಿತರು ಕೂಡಾ ಸೋಂಕಿತರಿಗೆ ಊಟ, ಉಪಹಾರ ನೀಡುವುದಕ್ಕೆ ನಿರ್ಧರಿಸಿದ್ದಾರೆ’ ಎಂದು ಮುರುಳಿಕೃಷ್ಣ ಹೇಳಿದರು.
ಒಂದು ಊಟ, ಉಪಹಾರಕ್ಕೆ ಒಟ್ಟು 120 ರೂ. ವೆಚ್ಚವಾಗುತ್ತಿದೆ. ಆರಂಭದಲ್ಲಿ ಮನೆಯಲ್ಲೇ ಆಹಾರ ತಯಾರಿಸಲು ನಿರ್ಧರಿಸಿದ್ದೇವು. ನಿರ್ವಹಣೆ ಕಷ್ಟವಾಗಿದ್ದರಿಂದ ಒಳ್ಳೆಯ ಹೋಟೆಲ್ ಆಯ್ಕೆ ಮಾಡಿಕೊಂಡು ಅವರ ಮೂಲಕವೆ ಸರಿಯಾದ ಸಮಯಕ್ಕೆ ಕೊರೋನಾ ಸೋಂಕಿತರಿಗೆ ಭೋಜನ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಮೊಬೈಲ್ ಸಂಖ್ಯೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಊಟ ಅಗತ್ಯ ಇದ್ದವರು ಫೋನ್ ಮಾಡುತ್ತಾರೆ. ನಾವು ಊಟ ತಲುಪಿಸುತ್ತಿದ್ದ ಕೊರೋನಾ ಸೋಂಕಿತರ ಪೈಕಿ 20 ಜನರು ಗುಣಮುಖರಾಗಿದ್ದಾರೆ