ಉಡುಪಿ: ಕ್ರೈಸ್ತ ಭಕ್ತನಿಂದ ಸಿದ್ಧಿವಿನಾಯಕ ದೇವಾಲಯ ನಿರ್ಮಾಣ..!
ಶಿರ್ವ(ಜು.16): ಇಲ್ಲಿನ ಶಿರ್ವ- ಮೂಡುಬೆಳ್ಳೆ ಕ್ರಾಸ್ ರಸ್ತೆ ಜಂಕ್ಷನ್‌ನಲ್ಲಿ ಉದ್ಯಮಿ ಗ್ಯಾಬ್ರಿಯಲ್ ನಜ್ರೆತ್ ಅವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಸುಮಾರು 1. 50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ದೇವರ ಪ್ರತಿಷ್ಠೆ ಗುರುವಾರ ನಡೆಯಿತು.
ಉಡುಪಿ ಶ್ರೀಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದೇವಳಕ್ಕೆ ಆಗಮಿಸಿ ಶ್ರೀ ಸಿದ್ದಿವಿನಾಯಕನಿಗೆ ಆರತಿ ಬೆಳಗಿಸಿ ಆಶೀರ್ವಚನ ನೀಡಿದರು ಮತ್ತು ಧಾರ್ಮಿಕ ಸೌಹಾರ್ದತೆ ಮೆರೆದ ಗ್ಯಾಬ್ರಿಯಲ್ ನಜ್ರೆತ್ ಅವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು
ಗ್ಯಾಬ್ರಿಯಲ್ ನಜ್ರೆತ್, ದೇವಳ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಉಭಯ ಶ್ರೀಗಳನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು.
ಜ್ಯೋತಿಷ್ಯ ವಿದ್ವಾನ್ ಕನ್ನರ್ಪಾಡಿ ಸಂದೀಪ್ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಲಿಮಾರು ಮಠದ ಹಿರಿಯ ವೈದಿಕರಾದ ಗಿರೀಶ್ ಉಪಾಧ್ಯಾಯ, ಪಡುಬೆಳ್ಳೆ ಪರಶುರಾಮ ಭಟ್ ಮತ್ತಿತರರಿದ್ದರು.
ಮುಂಬೈಯಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದ ಗ್ಯಾಬ್ರಿಯಲ್ ನಜ್ರೆತ್ ಅಲ್ಲಿನ ಸಿದ್ಧವಿನಾಯಕ ದೇವಳದ ಭಕ್ತರಾಗಿದ್ದರು. ಇದೀಗ ಉದ್ಯಮವನ್ನು ಬಿಟ್ಟು ಊರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.