ಬೆಂಗಳೂರು ಮಳೆ: 344 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ
ಬೆಂಗಳೂರು(ಅ.27): ಕಳೆದ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿ ಹಾನಿಗೆ ಒಳಗಾದ 344 ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 25 ಸಾವಿರ ರು. ಪರಿಹಾರ ನೀಡಿದೆ.
ದತ್ತಾತ್ರೇಯ ನಗರ, ಕುಮಾರಸ್ವಾಮಿ ಲೇಔಟ್‌ನಲ್ಲಿ ತಲಾ 25,000ದಂತೆ 344 ಕುಟುಂಬಗಳಿಗೆ 86 ಲಕ್ಷ ಪರಿಹಾರ ವಿತರಣೆ
ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್‌ಡಿಆರ್‌ಎಫ್) ಅಡಿ ತಲಾ ಮೂರು ಸಾವಿರ ರು. ಮಾತ್ರ ಪರಿಹಾರ ನೀಡುವುದಕ್ಕೆ ಅವಕಾಶ ಇದೆ. ಆದರೆ ಹೆಚ್ಚು ಹಾನಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ದೇಶನದ ಮೇಲೆ ದತ್ತಾತ್ರೇಯ ಬಡಾವಣೆಯಲ್ಲಿ 304 ಹಾಗೂ ಕುಮಾರಸ್ವಾಮಿ ಬಡಾವಣೆಯ 40 ಕುಟುಂಬಗಳಿಗೆ ತಲಾ 25 ಸಾವಿರದಂತೆ ಒಟ್ಟು 86 ಲಕ್ಷ ರು. ಪರಿಹಾರ ವಿತರಿಸಲಾಗಿದೆ.
ಪರಿಹಾರದ ಚೆಕ್‌ಗಳನ್ನು ಸಂತ್ರಸ್ತರಿಗೆ ನೀಡಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ಸೇರಿದಂತೆ ವಿವಿಧೆಡೆ ಮಳೆಯಿಂದ ಮನೆ ಹಾಳಾಗಿರುವ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತಿದೆ. ಅಲ್ಲದೆ, ಮಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಹಾನಿಗೆ ಒಳಗಾದ ಕುಟುಂಬಗಳಿಗೆ ತಲಾ 10 ಸಾವಿರ ರು. ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸಮೀಕ್ಷೆ ನಡೆಸಿ ಪಟ್ಟಿನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನೆಲ ಮಹಡಿಯಲ್ಲಿ ನೆಲೆಸಿದ್ದು, ಮಳೆಯಿಂದ ಹಾನಿಯಾದ ಮನೆಗಳಲ್ಲಿ ನೆಲೆಸಿರುವ ಕುಟುಂಬದವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ವಾಸವಿರುವವರಿಗೆ ನಿಯಮಾನುಸಾರ ಪರಿಹಾರ ನೀಡಲು ಬರುವುದಿಲ್ಲ. ಮಳೆ ಹಾನಿ ಉಂಟಾದ ರಸ್ತೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ಪ್ರದೇಶವನ್ನು ಶೀಫ್ರ ಗುರುತಿಸಿ, ತೆರವು ಕಾರ್ಯಚರಣೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ದತ್ತಾತ್ರೇಯ ನಗರದ ರಾಜಕಾಲುವೆ ಸಮಸ್ಯೆ ಪರಿಹರಿಸುವ ಸಂಬಂಧ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತ ಸ್ಥಳ ಪರಿಶೀಲನೆ ನಡೆಸಿದರು. ರಾಜಕಾಲುವೆ ಮಾರ್ಗ ಕಿರಿದಾಗಿರುವುದು ಹಾಗೂ ರಾಜಕಾಲುವೆ ಮಾರ್ಗದ ಪೈಪ್‌ಲೈನ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೂಡಲೇ ಸರಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜಕಾಲುವೆ ತಡೆಗೋಡೆ ಕುಸಿದ ಭಾಗದಲ್ಲಿ ಮರಳು ತುಂಬಿದ ಚೀಲದ ಮೂಟೆಗಳನ್ನು ಹಾಕಲಾಗಿದ್ದು, ತ್ವರಿತವಾಗಿ ಕಾಂಕ್ರೀಟ್ ಗೋಡೆ ನಿರ್ಮಿಸಲು ಸೂಚಿಸಲಾಗಿದೆ. ರಾಜಕಾಲುವೆಗೆ ಹೊಂದಿಕೊಂಡಿರುವ ಹಾಗೂ ಸಮೀಪದಲ್ಲಿರುವ ಮನೆಗಳ ಅಡಿಪಾಯ ಮತ್ತು ಕಟ್ಟಡದಲ್ಲಿ ಜನ ವಾಸಿಸಲು ಯೋಗ್ಯವಾಗಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶಿಸಿದ್ದಾರೆ.
ಹೊಸಕೆರೆಹಳ್ಳಿ ವಾರ್ಡ್‌ನ ದತ್ರಾತ್ರೇಯ ಬಡಾವಣೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಕೆಲವು ಅಡಚಣೆಗಳಿದ್ದು, ಕಿರಿದಾದ ರಾಜಕಾಲುವೆ ಮಾರ್ಗ ಅಗಲ ಹೆಚ್ಚಿಸುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಲಿದೆ. ಕೊಳಚೆ ನೀರು ಹರಿದು ಹೋಗುವ ಮಾರ್ಗವೂ ಕಿರಿದಾಗಿದೆ. ಇವೆಲ್ಲವನ್ನೂ ಹಂತ- ಹಂತವಾಗಿ ಶೀಘ್ರ ಸರಿಪಡಿಸುತ್ತೇವೆ ಎಂದು ಬಿಬಿಎಂಪಿ ರಾಜಕಾಲುವೆ ಮುಖ್ಯ ಎಂಜಿನಿಯರ್ ಬಿ.ಎನ್.ಪ್ರಹ್ಲಾದ್ ತಿಳಿಸಿದರು.
ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಬಸವರಾಜು, ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರ ಸ್ವಾಮಿ ಹಾಗೂ ಉಪ ಆಯುಕ್ತೆ ಲಕ್ಷ್ಮೀದೇವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಳೆಹಾಳಿಗೆ ಒಳಗಾದ 344 ಕುಟುಂಬಗಳಿಗೆ ಸರ್ಕಾರ ತಲಾ 25 ಸಾವಿರ ರು. ಪರಿಹಾರ ನೀಡಿದೆ. ಆದರೆ, ಈ ಪೈಕಿ ಸುಮಾರು 100 ಹೆಚ್ಚು ಮನೆಗಳವರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ತಾತ್ಕಾಲಿಕವಾಗಿ ಸರ್ಕಾರ ಅವರಿಗೆ ಪರಿಹಾರ ನೀಡಿದೆ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಿದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.