Chamarajnagar: ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ದೇವಾಲಯ
ಚಾಮರಾಜನಗರ ಜಿಲ್ಲೆಯ ಹನೂರು ಮತ್ತು ಬೇಗೂರು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಸೇತುವೆ ಹಾಗೂ ದೇವಾಲಯ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರೂ, ದೀರ್ಘಕಾಲದ ಬರಗಾಲದ ನಂತರ ಬಂದ ಮಳೆಯು ರೈತರಿಗೆ ಹುರುಳಿ ಬಿತ್ತನೆಗೆ ಆಶಾಭಾವನೆ ಮೂಡಿಸಿದೆ.

ಕೊಚ್ಚಿ ಹೋದ ಬ್ರಿಡ್ಜ್
ಚಾಮರಾಜನಗರ ಜಿಲ್ಲೆಯ ಹನೂರು ಭಾಗದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಭಾರಿ ಆವಾಂತರವೇ ಸೃಷ್ಟಿಯಾಗಿದೆ. ಮಳೆಯ ರಭಸಕ್ಕೆ ಅರೆಕನಹಳ್ಳ ತುಂಬಿ ಹರಿದು, ಲೋಕನಹಳ್ಳಿ ಮತ್ತು ಒಡೆಯರಪಾಳ್ಯ ಸಂಪರ್ಕಿಸುವ ಬ್ರಿಡ್ಜ್ ಕೊಚ್ಚಿ ಹೋಗಿರುವುದರಿಂದ ಸಂಪೂರ್ಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.
ಮಾರ್ಗ ಬದಲಾವಣೆ
ಮತ್ತೊಂದೆಡೆ, ಕೌದಳ್ಳಿ ಸಮೀಪದಲ್ಲೂ ಸೇತುವೆಗೆ ಹಾನಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್‌ಗಳ ಸಂಚಾರವನ್ನು ಅಜ್ಜೀಪುರ-ರಾಮಾಪುರ-ಕೌದಳ್ಳಿ ಮಾರ್ಗವಾಗಿ ಬದಲಾಯಿಸಲಾಗಿದೆ.
ಸಾರ್ವಜನಿಕರಲ್ಲಿ ಆತಂಕ
ಹಳ್ಳದ ಪಕ್ಕದಲ್ಲಿದ್ದ ಗಣೇಶನ ದೇವಾಲಯವೂ ನೀರಿನ ಭಾರಿ ಹರಿವಿಗೆ ಕೊಚ್ಚಿ ಹೋಗಿದೆ. ರಸ್ತೆಯ ಇಕ್ಕೆಲಗಳು ಜರಿದು ಬಿದ್ದಿರುವುದರಿಂದ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದೀರ್ಘಕಾಲದ ನಂತರ ಬಂದ ಮಳೆ ಜನರಲ್ಲಿ ಸಂತಸ ತಂದಿದೆಯಾದರೂ, ಈ ರೀತಿಯ ಹಾನಿ ಮತ್ತು ಆವಾಂತರಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಬರಗಾಲದಲ್ಲೂ ಧಾರಾಕಾರ ಸುರಿದ ಹಸ್ತ ಮಳೆ
ಕಳೆದ ನಾಲ್ಕು ತಿಂಗಳಲ್ಲಿ ಕಾಣದ ಮಳೆ ಸೋಮವಾರ ಅಬ್ಬರಿಸಿ ತಾಲೂಕಿನ ಬೇಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 40 ನಿಮಿಷಗಳ ಕಾಲ ಗಾಳಿ, ಗುಡುಗು, ಆಲಿಕಲ್ಲು ಧಾರಾಕಾರ ಮಳೆ ಸುರಿಯಿತು. ತಾಲೂಕಿನ ಬೇಗೂರು, ಕಮರಹಳ್ಳಿ, ತಗ್ಗಲೂರು, ಹಳ್ಳದಮಾದಹಳ್ಳಿ, ರಾಘವಾಪುರ, ಹಕ್ಕಲಪುರ, ಅರೇಪುರ, ತೊಂಡವಾಡಿ, ಚಿಕ್ಕಾಟಿ, ರಂಗೂಪುರ, ಬೆಳಚಲವಾಡಿ, ದೊಡ್ಡಹುಂಡಿ, ಚಿಕ್ಕಹುಂಡಿ, ಹೊರೆಯಾಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ.
ಹುರುಳಿ ಬಿತ್ತನೆಗೆ ಅವಕಾಶ
ಹಸ್ತ ಮಳೆಯ ಆರ್ಭಟಕ್ಕೆ ಜಮೀನುಗಳಲ್ಲಿ, ಹಳ್ಳಕೊಳ್ಳಗಳಲ್ಲಿ ನೀರು ನಿಂತಿದ್ದು, ನೀರು ಹರಿದಿದೆ. ನಾಲ್ಕು ತಿಂಗಳಿನಿಂದ ಮಳೆಯಿಲ್ಲದೆ ಬಿರುಕು ಬಿಟ್ಟಿದ್ದ ಭೂಮಿ ತಂಪಾಗಿದೆ. ಈ ಮಳೆ ಹುರುಳಿ ಬಿತ್ತನೆಗೆ ಅವಕಾಶ ಮಾಡಿಕೊಟ್ಟಿದ್ದು,ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ.

