- Home
- Karnataka Districts
- ₹40 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ಮಗಳು 1 ತಿಂಗಳು ಸಂಸಾರ ಮಾಡಲಿಲ್ಲ; ಹನಿಮೂನ್ ಪೂರ್ಣಗೊಳಿಸದೇ ಪ್ರಾಣಬಿಟ್ಟಳು!
₹40 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ಮಗಳು 1 ತಿಂಗಳು ಸಂಸಾರ ಮಾಡಲಿಲ್ಲ; ಹನಿಮೂನ್ ಪೂರ್ಣಗೊಳಿಸದೇ ಪ್ರಾಣಬಿಟ್ಟಳು!
₹40 ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆಯಾಗಿ ಶ್ರೀಲಂಕಾ ಹನಿಮೂನ್‌ಗೆ ತೆರಳಿದ್ದ ನವವಿವಾಹಿತೆ, ಅರ್ಧಕ್ಕೆ ಹನಿಮೂನ್ ಬಿಟ್ಟುಬಂದು ಅಪ್ಪನ ಮನೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ಒಂದೂವರೆ ತಿಂಗಳಲ್ಲೇ ನವವಿವಾಹಿತೆ ಗಾನವಿ ಸಾವನ್ನಪ್ಪಿದ್ದಾರೆ.

ಬೆಂಗಳೂರು (ಡಿ.26): ಅದ್ದೂರಿಯಾಗಿ ಮದುವೆಯಾಗಿ, ವಿದೇಶಕ್ಕೆ ಹನಿಮೂನ್‌ಗೆ ಹೋಗಿ ಬಂದ ನವವಿವಾಹಿತೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮದುವೆಯಾಗಿ ಕೇವಲ ಒಂದೂವರೆ ತಿಂಗಳಲ್ಲೇ 26 ವರ್ಷದ ಗಾನವಿ ಎಂಬ ಯುವತಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಪತಿಯ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗಾನವಿ ಮತ್ತು ಸೂರಜ್ ಎಂಬುವವರ ವಿವಾಹ ಕಳೆದ ಅಕ್ಟೋಬರ್ 29 ರಂದು ನಡೆದಿತ್ತು. ನವೆಂಬರ್ 23 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಲಾಗಿತ್ತು.
ಮದುವೆಯ ನಂತರ ದಂಪತಿ 10 ದಿನಗಳ ಕಾಲ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಆದರೆ, ಅಲ್ಲಿಂದಲೇ ಇಬ್ಬರ ನಡುವೆ ಕಲಹ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹತ್ತು ದಿನಗಳ ಟ್ರಿಪ್‌ಗೆ ತೆರಳಿದ್ದ ದಂಪತಿ, ಕೇವಲ ಐದು ದಿನಗಳಲ್ಲೇ ಭಾನುವಾರ ವಾಪಾಸ್ ಬಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ 'ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ' ಎಂದು ಸೂರಜ್ ಕುಟುಂಬಸ್ಥರು ಗಾನವಿ ಪೋಷಕರಿಗೆ ಅವಾಜ್ ಹಾಕಿದ್ದರು ಎನ್ನಲಾಗಿದೆ.
ಜಗಳ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಮಗಳನ್ನು ತಂದೆ-ತಾಯಿ ತಮ್ಮ ಮನೆಗೆ ಕರೆತಂದಿದ್ದರು. ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಗಾನವಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದರು.
ಆತ್ಮ*ಹತ್ಯೆಗೆ ಯತ್ನಿಸಿದ ಗಾನವಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಇರಿಸಲಾಗಿತ್ತು. ತಪಾಸಣೆ ನಡೆಸಿದ್ದ ವೈದ್ಯರು ಗಾನವಿ 'ಬ್ರೈನ್ ಡೆಡ್' ಆಗಿದ್ದಾರೆ ಎಂದು ತಿಳಿಸಿ ವೆಂಟಿಲೇಟರ್‌ನಲ್ಲಿ ಇರಿಸಿದ್ದರು. ಆದರೆ, ಎರಡು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗಾನವಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಗಾನವಿ ಸಾವಿಗೆ ವರದಕ್ಷಿಣೆ ಕಿರುಕುಳ ಹಾಗೂ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ್ದೇ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ. ಪತಿ ಸೂರಜ್, ಅತ್ತೆ ಜಯಂತಿ ಹಾಗೂ ಸೂರಜ್ ಅಣ್ಣ ಸಂಜಯ್ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

