- Home
- Karnataka Districts
- ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!
ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಹಳೇ ಚಂದಾಪುರದ ಬಳಿ ನಡೆಯುತ್ತಿದ್ದ ಅಂಡರ್ ಪಾಸ್ ಕಾಮಗಾರಿಯಿಂದಾಗಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಂಗಳೂರು/ಆನೇಕಲ್ (ಫೆ.04): ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯು (NH-44) ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಕಳೆದ 6 ತಿಂಗಳಿಂದ ನಡೆಯುತ್ತಿರುವ ಆಮೆಗತಿ ಕಾಮಗಾರಿಗೆ ಈ ರಸ್ತೆ ಕುಸಿತವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹಳೇ ಚಂದಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದು ಬರುತ್ತಿರುವ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಬೃಹತ್ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. 20 ಅಡಿ ಆಳದ ಈ ಕುಸಿತವು ಹೆದ್ದಾರಿಯ ಸುರಕ್ಷತೆಯನ್ನೇ ಪ್ರಶ್ನಿಸುವಂತೆ ಮಾಡಿದ್ದು, ಮುಂಜಾನೆ 5 ಗಂಟೆಯಿಂದಲೇ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಚಂದಾಪುರದಿಂದ ಅತ್ತಿಬೆಲೆವರೆಗೆ ಒಟ್ಟು ಮೂರು ಅಂಡರ್ ಪಾಸ್ ಹಾಗೂ ರೈಲ್ವೇ ಅಂಡರ್ ಬ್ರಿಡ್ಜ್ ಕಾಮಗಾರಿಗಳು ಏಕಕಾಲಕ್ಕೆ ನಡೆಯುತ್ತಿವೆ. ಆದರೆ, ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಬೆಸ್ಕಾಂ ಅಧಿಕಾರಿಗಳು ಅಸಹಕಾರ ತೋರುತ್ತಿರುವುದು ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದೆಡೆ ಮಂದಗತಿ ಕಾಮಗಾರಿ, ಇನ್ನೊಂದೆಡೆ ರಸ್ತೆ ಕುಸಿತದಿಂದಾಗಿ ಈ ಭಾಗದ ಜನರ ಬದುಕು ಹೈರಾಣಾಗಿದೆ.
ಮುಂಜಾನೆಯಿಂದಲೇ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಾಲಾ-ಕಾಲೇಜು ಬಸ್ಸುಗಳು ರಸ್ತೆಯಲ್ಲೇ ಸಿಲುಕಿಕೊಂಡಿವೆ. ಕೆಲಸಕ್ಕೆ ತೆರಳುವ ಐಟಿ ಉದ್ಯೋಗಿಗಳು ಹಾಗೂ ಕಾರ್ಖಾನೆ ಕಾರ್ಮಿಕರು ಗಂಟೆಗಟ್ಟಲೆ ಬಿಸಿಲಿನಲ್ಲಿ ಒದ್ದಾಡುವಂತಾಗಿದೆ. ಅತ್ಯಂತ ಗಂಭೀರ ವಿಚಾರವೆಂದರೆ, ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಕೂಡ ಈ ಟ್ರಾಫಿಕ್ ಕಿರಿಕಿರಿಯಲ್ಲಿ ಸಿಲುಕಿ ಪರದಾಡಿದ ದೃಶ್ಯಗಳು ಕಂಡುಬಂದವು.
'ಕಳೆದ ಆರು ತಿಂಗಳಿಂದ ನಮಗೆ ಈ ನರಕಯಾತನೆ ತಪ್ಪಿಲ್ಲ. ಈಗ ರಸ್ತೆ ಕುಸಿದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಪ್ರತಿದಿನ ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಗಿದೆ' ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೂಡಲೇ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

