- Home
- Karnataka Districts
- ಬಾದಾಮಿ ದನದ ಕೊಟ್ಟಿಗೆಗೆ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು; ರೈತ ಕುಬೇರನ ಎತ್ತಿನ ಸ್ಥಿತಿ ಗಂಭೀರ
ಬಾದಾಮಿ ದನದ ಕೊಟ್ಟಿಗೆಗೆ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು; ರೈತ ಕುಬೇರನ ಎತ್ತಿನ ಸ್ಥಿತಿ ಗಂಭೀರ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ದುಷ್ಕರ್ಮಿಗಳು ರೈತರೊಬ್ಬರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಕೊಟ್ಟಿಗೆ, ಮೇವು ಸಂಪೂರ್ಣ ಸುಟ್ಟುಹೋಗಿದ್ದು, ಒಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.

ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮೂಕ ಪ್ರಾಣಿಯ ರೋದನೆ
ಬಾಗಲಕೋಟೆ (ಜ.04): ಜಿಲ್ಲೆಯ ಬಾದಾಮಿ ತಾಲೂಕಿನ ಯರಗೊಪ್ಪ ಎಸ್ ಬಿ ಗ್ರಾಮದಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಹಸುಗಳ ಆಸರೆಯಾಗಿದ್ದ ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ರೈತ ಕುಟುಂಬ ಬೀದಿಗೆ ಬೀಳುವಂತಾಗಿದೆ.
ಘಟನೆಯ ವಿವರ
ಗ್ರಾಮದ ರೈತ ಕುಭೇರ ಮರೆಣ್ಣವರ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹರಡುತ್ತಿದ್ದಂತೆಯೇ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು ಬೆಂಕಿಯ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದೆ. ಎತ್ತಿನ ದೇಹದ ಬಹುಭಾಗ ಸುಟ್ಟಿದ್ದು, ಪ್ರಾಣಾಪಾಯದ ಸ್ಥಿತಿಯಲ್ಲಿದೆ. ಕೊಟ್ಟಿಗೆಯಲ್ಲಿದ್ದ ಮೇವು, ಕೃಷಿ ಸಲಕರಣೆಗಳು ಹಾಗೂ ಶೆಡ್ ಸಂಪೂರ್ಣ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ರೈತರ ಆಕ್ರೋಶ ಮತ್ತು ಆಗ್ರಹ
ಕಷ್ಟಪಟ್ಟು ಕಟ್ಟಿದ ಕೊಟ್ಟಿಗೆ ಹಾಗೂ ಜೀವದಂತಿದ್ದ ಎತ್ತು ಬೆಂಕಿಗೆ ಆಹುತಿಯಾಗಿರುವುದನ್ನು ಕಂಡು ಕುಭೇರ ಮರೆಣ್ಣವರ ಕುಟುಂಬ ಕಣ್ಣೀರು ಹಾಕುತ್ತಿದೆ. 'ನಮ್ಮ ಹೊಟ್ಟೆ ಮೇಲೆ ಹೊಡೆದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು' ಎಂದು ರೈತರು ಒತ್ತಾಯಿಸಿದ್ದಾರೆ. ಗ್ರಾಮಸ್ಥರು ಸೇರಿ ಸರ್ಕಾರದ ಗಮನ ಸೆಳೆದಿದ್ದು, ಸಂಕಷ್ಟದಲ್ಲಿರುವ ರೈತ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ತನಿಖೆ
ಘಟನೆಗೆ ಸಂಬಂಧಿಸಿದಂತೆ ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

