- Home
- Karnataka Districts
- 'ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಕೇಸ್‌ನಿಂದ ಕೈಬಿಡಿ..' ಹೈಕೋರ್ಟ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನವಿ
'ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಕೇಸ್‌ನಿಂದ ಕೈಬಿಡಿ..' ಹೈಕೋರ್ಟ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನವಿ
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು, ತಮ್ಮ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್‌ಪೋರ್ಟ್ ಸಮಸ್ಯೆ ಎದುರಿಸುತ್ತಿರುವ ಕಾರಣ, ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದತಿಗೆ ಕೋರಿಕೆ
ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಹೆಗಡೆ ಪರ ವಕೀಲರು, "ಅನಂತಕುಮಾರ್ ಅವರ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಗಲಾಟೆ ಪ್ರಕರಣದಿಂದಾಗಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು" ಎಂದು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಪೀಠಕ್ಕೆ ಮನವಿ ಮಾಡಿದರು.
"ಅಶುತೋಷ್ ಕಾರಿನಿಂದ ಕೆಳಗೆ ಇಳಿದೇ ಇಲ್ಲ":
ವಿಚಾರಣೆ ವೇಳೆ ವಕೀಲ ಪವನ್‌ಚಂದ್ರ ಶೆಟ್ಟಿ ಅವರು, "ಘಟನೆ ನಡೆದಾಗ ಅಶುತೋಷ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆ ಕಾರಿನ ವಿನ್ಯಾಸದ ಪ್ರಕಾರ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನವರು ಇಳಿಯಲು ಸಾಧ್ಯ. ಅವರು ಘಟನಾ ಸ್ಥಳಕ್ಕೆ ಬಂದೇ ಇರಲಿಲ್ಲ. ಆದರೂ ತನಿಖಾಧಿಕಾರಿಯು ಅಶುತೋಷ್ ಅವರನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇವರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಆರೋಪ ಪಟ್ಟಿಯಲ್ಲಿ ಉಲ್ಲೇಖವಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಲ್ಲೆ ನಡೆಸುತ್ತಿರುವ ವಿಡಿಯೋ ಇದೆ ಎಂದ ಸರ್ಕಾರಿ ಅಭಿಯೋಜಕರು
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿ, "ಅನಂತಕುಮಾರ್ ಹೆಗಡೆ, ಅವರ ಅಂಗರಕ್ಷಕ ಮತ್ತು ಕಾರಿನ ಚಾಲಕ ದೂರುದಾರರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಲಭ್ಯವಿದೆ. ಸದ್ಯಕ್ಕೆ ನಮ್ಮ ಬಳಿ ಆರೋಪಪಟ್ಟಿಯ ಪ್ರತಿ ಇಲ್ಲದಿದ್ದರೂ, ಮುಂದಿನ ವಿಚಾರಣೆ ವೇಳೆಗೆ ನಾಲ್ಕನೇ ಆರೋಪಿ ಅಶುತೋಷ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು" ಎಂದು ತಿಳಿಸಿದರು.
ಘಟನೆಯ ಹಿನ್ನೆಲೆ ಮತ್ತು ಗಂಭೀರ ಆರೋಪಗಳು
ಕಳೆದ ವರ್ಷದ ಜೂನ್‌ನಲ್ಲಿ ತುಮಕೂರಿನ ಹಳೇ ನಿಜಗಲ್ ಬಳಿ ಕಾರು ಹಿಂದಿಕ್ಕುವ ವಿಚಾರದಲ್ಲಿ ಈ ಗಲಾಟೆ ನಡೆದಿತ್ತು. ದೂರುದಾರ ಸೈಫ್ ಖಾನ್ ಪ್ರಕಾರ, "ಅನಂತಕುಮಾರ್ ಹೆಗಡೆ ಅವರ ಕಾರಿನಲ್ಲಿದ್ದವರು ನಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಸಲ್ಮಾನ್ ಖಾನ್ ಎಂಬುವವರ ಮೂರು ಹಲ್ಲುಗಳು ಮುರಿದಿವೆ. ಅನಂತಕುಮಾರ್ ಹೆಗಡೆ ಅವರು ನಮ್ಮ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಚಾರಣೆ ಏಪ್ರಿಲ್ 16ಕ್ಕೆ ಮುಂದೂಡಿಕೆ
ಎಲ್ಲಾ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಅಶುತೋಷ್ ಹೆಗಡೆ ಅವರ ಹೆಸರನ್ನು ಪ್ರಕರಣದಿಂದ ಕೈಬಿಡುವ ಕುರಿತಾದ ಮನವಿಯನ್ನು ಏಪ್ರಿಲ್ 16 ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಪರಿಗಣಿಸುವುದಾಗಿ ಹೇಳಿ, ವಿಚಾರಣೆಯನ್ನು ಮುಂದೂಡಿತು. ಸದ್ಯ ದಾಬಸ್‌ಪೇಟೆ ಪೊಲೀಸರು ಅನಂತಕುಮಾರ್ ಹೆಗಡೆ ಮತ್ತು ಅವರ ಸಿಬ್ಬಂದಿ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

