ಗದಗ: ಅತಿಯಾದ ಮಳೆ, ಒಂದೇ ವಾರದಲ್ಲಿ 635 ಮನೆ ಕುಸಿತ, ಕಂಗಾಲಾದ ಜನತೆ
ಶಿವಕುಮಾರ ಕುಷ್ಟಗಿ
ಗದಗ(ಅ.17): ಜಿಲ್ಲೆಯಾದ್ಯಂತ ಕಳೆದೊಂದು ವಾರದಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಜನರು ಸೂರು ಕಳೆದುಕೊಂಡು ಬೀದಿಗೆ ಬಂದಿದ್ದು, ಇನ್ನು ಸಾವಿರಾರು ಜನ ಇನ್ನಾವುದೋ ಕ್ಷಣದಲ್ಲಿ ಮನೆ ಕುಸಿಯುವ ಭೀತಿಯಲ್ಲಿಯೇ ಬದುಕು ದೂಡುತ್ತಿದ್ದು, ಮಣ್ಣಿನ ಮನೆಗಳಂತೆ ಕುಸಿಯುವ ತವಕದಲ್ಲಿ ಕಾಯುತ್ತಿವೆ.
ಕಳೆದ ಒಂದು ವಾರದಲ್ಲಿಯೇ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 635 ಮನೆಗಳು ಕುಸಿತವಾಗಿದ್ದು, ಅದರಲ್ಲಿ ಅತಿ ಹೆಚ್ಚು ರೋಣ ತಾಲೂಕಿನಲ್ಲಿಯೇ ಸಂಭವಿಸಿದೆ. ಆನಂತರ ಸ್ಥಾನದಲ್ಲಿ ನರಗುಂದ ಮತ್ತು ಗದಗ ತಾಲೂಕುಗಳಿವೆ. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚಿನ ಮನೆಗಳು ಕುಸಿತವಾಗಿದ್ದು, ಅವರೆಲ್ಲ ಬೀದಿಯಲ್ಲಿಯೇ ಬದುಕುವಂತಾಗಿದೆ.
ಕಳೆದ ತಿಂಗಳು ಹಾಗೂ ಪ್ರಸಕ್ತ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 1,410 ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿದ್ದು ವಾಸಿಸಲು ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಮನೆ ಕುಸಿತವಾಗಿರುವ ಎಲ್ಲರೂ ಬೇರೆಯವರ ಮನೆಯಲ್ಲಿ ಬಾಡಿಗೆ ಇರಬೇಕು ಇಲ್ಲವೇ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ಜಿಲ್ಲೆಯಾದ್ಯಂತ ನಿರ್ಮಾಣ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂದಿಗೂ ಕಚ್ಚಾ ಮನೆಗಳು ಎಂದು ಕರೆಯಲ್ಪಡುವ ಮಣ್ಣಿನಿಂದ ನಿರ್ಮಿಸಿದ ಮನೆಗಳಲ್ಲಿಯೇ ವಾಸ ಮಾಡುವವರ ಸಂಖ್ಯೆ ಶೇ. 70ರಷ್ಟಿದ್ದು ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಊರನಲ್ಲಿನ ಮನೆಗಳು ಕುಸಿಯುತ್ತಿವೆ.
ಅತಿಯಾದ ಮಳೆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸರ್ವನಾಶ ಮಾಡುತ್ತಿದ್ದು, ಮಳೆ ಸೃಷ್ಟಿಸಿದ ಅವಾಂತದಿಂದ ತತ್ತರಿಸಿ ಹೋದ ಜಿಲ್ಲೆಯ ಜನತೆ
ಜಿಲ್ಲೆಯಾದ್ಯಂತ ಕಳೆದೊಂದು ವಾರದಲ್ಲಿ 635 ಮನೆಗಳಿಗೆ ಹಾನಿಯಾಗಿದ್ದು, ಮೌಲ್ಯ 3.17 ಕೋಟಿ ಎಂದು ಅಂದಾಜಿಸಲಾಗಿದೆ. ಅವರೆಲ್ಲರಿಗೂ ಅದ್ಯಾವಾಗ ಇಷ್ಟೊಂದು ಪರಿಹಾರ ಕೊಡುತ್ತಾರೆ? ಮನೆ ಕಳೆದುಕೊಂಡವರಿಗೆ ತಕ್ಷಣವೇ ಬೇಕಾಗುವ ಸೂರು ಕಲ್ಪಿಸುವುದು ಜಿಲ್ಲಾಡಳಿತದಿಂದ ತಕ್ಷಣವೇ ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ. ಆದರೆ, ವಾಸ್ತವದಲ್ಲಿ ಮನೆ ಕುಸಿದು ಬೀದಿಗೆ ಬಂದವರು ಮಾತ್ರ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.
ಅ. 1ರಿಂದ 15ರ ವರೆಗೆ ಜಿಲ್ಲೆಯಾದ್ಯಂತ ಸುರಿದ ಸತತ ಮಳೆಗೆ, ಹಳ್ಳ ನದಿಗಳ ಪಕ್ಕದಲ್ಲಿರುವ ಹೊಲಗಳಿಗೆ ನೀರು ನುಗ್ಗಿ, ರಸ್ತೆ, ಸೇತುವೆಗಳಿಗೆ ಆಗಿರುವ ಒಟ್ಟು ಹಾನಿಯನ್ನು 94.47 ಕೋಟಿ ಎಂದು ಅಂದಾಜಿಸಿದ್ದು, ಇದಕ್ಕಾಗಿ ಬೇಕಾಗುವ ಎಲ್ಲ ದಾಖಲೆಗಳನ್ನು ಈಗಾಗಲೇ ಜಿಲ್ಲಾಡಳಿತ ವರದಿ ರೂಪದಲ್ಲಿ ಸಿದ್ಧ ಮಾಡಿಕೊಂಡಿದ್ದು ಸರ್ಕಾರಕ್ಕೆ ಪ್ರಸ್ತಾವನೆಗೆ ಸಲ್ಲಿಸಲು ಸಿಧ್ಯವಾಗಿದೆ ಆದರೆ, ಮಳೆರಾಯ ಮಾತ್ರ ವರದಿ ಅಂತಿಮವಾಗಲು ಸಹ ಬಿಡದೇ ಸುರಿದು ಮತ್ತಷ್ಟುಆತಂಕ, ಮತ್ತಷ್ಟು ಹಾನಿ ಸೃಷ್ಟಿ ಮಾಡುತ್ತಿದೆ.
ಮಲಪ್ರಭಾ ಹಾಗೂ ಬೆಣ್ಣೆ ಸೇರಿದಂತೆ ಹಳ್ಳಗಳ ಹೆಚ್ಚುವರಿ ನೀರಿನಿಂದಾಗಿ ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟುಬೆಳೆ ಹಾನಿ ಸಂಭವಿಸಿದೆ, ಇನ್ನು 600ಕ್ಕೂ ಅಧಿಕ ಜನರು ಸೂರು ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತ ಕೂಡಲೇ ಅವರ ನೆರವಿಗೆ ಧಾವಿಸಬೇಕು, ಸೂರು ಕಳೆದುಕೊಂಡವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು, ಬೆಳೆ ಪರಿಹಾರವನ್ನು ಸಾಧ್ಯವಾದಷ್ಟುಬೇಗನೇ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ ಅವರು ತಿಳಿಸಿದ್ದಾರೆ.