ಶತಕ ಕೈತಪ್ಪಿದ ಬೆನ್ನಲ್ಲೇ ಕ್ರಿಸ್ ಗೇಲ್‌ಗೆ ಮತ್ತೊಂದು ಶಾಕ್..!
ಅಬುಧಾಬಿ: ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಎದುರು ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೇವಲ 1 ರನ್ ಅಂತರದಲ್ಲಿ ಶತಕ ವಂಚಿತರಾದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮುನ್ನವೇ ಗೇಲ್ ನಿರಾಸೆ ಹೊರಹಾಕಿದರು. ಇದೀಗ ಗೇಲ್‌ಗೆ ಐಪಿಎಲ್ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸಿ ಜಯದ ನಾಗಾಲೋಟ ಮುಂದುವರೆಸಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಬ್ರೇಕ್ ಹಾಕಿದೆ.
ಪಂಜಾಬ್ ಮಹತ್ವದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲು ಕಂಡಿರುವ ರಾಹುಲ್ ಪಡೆಯ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿದೆ.
ಇನ್ನು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅಕ್ಷರಶಃ ಅಬ್ಬರಿಸಿದ್ದಾರೆ.
ಕ್ರಿಸ್ ಗೇಲ್ ಕೇವಲ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 99 ರನ್ ಬಾರಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
20ನೇ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಗೇಲ್(99) ಆ ಬಳಿಕ ಮರು ಎಸೆತದಲ್ಲೇ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು.
ಶತಕದ ಹೊಸ್ತಿಲಲ್ಲಿ ವಿಕೆಟ್ ಕೈಚೆಲ್ಲಿದ್ದರಿಂದ ಬೇಸರಗೊಂಡ ಕ್ರಿಸ್ ಗೇಲ್ ತಮ್ಮ ಕೈಯಲ್ಲಿದ್ದ ಬ್ಯಾಟನ್ನು ಬೀಸಿ ದೂರಕ್ಕೆ ಎಸೆದರು.
ಇದು ಐಪಿಎಲ್ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಯೂನಿವರ್ಸಲ್ ಬಾಸ್‌ಗೆ ಬಿಸಿ ಮುಟ್ಟಿಸಿದೆ.
ಹೌದು, ಗೇಲ್ ಮಾಡಿದ ಈ ಅನುಚಿತ ವರ್ತನೆ ಒಂದನೇ ಹಂತದ ಪ್ರಮಾದವಾಗಿದ್ದು, ಐಪಿಎಲ್ 2.2 ಕೋಡ್ ನೀತಿ ಸಂಹಿತೆಯ ಉಲ್ಲಂಘನೆಯನ್ನು ಕ್ರಿಸ್ ಗೇಲ್ ಕೂಡಾ ಒಪ್ಪಿಕೊಂಡಿದ್ದಾರೆ.
ಹೀಗಾಗಿ ಪಂದ್ಯದ ಮ್ಯಾಚ್ ರೆಫ್ರಿ ಪಂಜಾಬ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಪಂದ್ಯದ ಸಂಭಾವನೆಯ ಶೇ.10% ದಂಡ ವಿಧಿಸಿದ್ದಾರೆ.