ಮ್ಯಾನ್ ಆಫ್ ದಿ ಮ್ಯಾಚ್ ಶಮಿಗೆ ಕೊಡಬೇಕಿತ್ತು ಎಂದ ಯೂನಿವರ್ಸಲ್ ಬಾಸ್..!
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 36ನೇ ಪಂದ್ಯವನ್ನು ಬಹುಶಃ ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವೇ ಇಲ್ಲ. ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗೆ ಸಾಕ್ಷಿಯಾದ ಸನ್ನಿವೇಶ ನಿರ್ಮಾಣವಾಗಿತ್ತು.
ತಮಾಷೆಯಾಗಿ ಹೇಳಬೇಕು ಎಂದರೆ ಭಾನುವಾರ(ಅ.18)ದಂದು ಆರಂಭವಾದ ಟಿ20 ಪಂದ್ಯ ಸೋಮವಾರ(ಅ.19)ರಂದು ಮುಕ್ತಾಯವಾಯಿತು ಅಂದರೆ ನೀವೇ ಯೋಚ್ನೆ ಮಾಡಿ. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕವಾಗಿ ಗೆಲುವು ದಾಖಲಿಸಿತು. ಈ ಪಂದ್ಯದ ನಿಜವಾದ ಹೀರೋ ಮೊಹಮ್ಮದ್ ಶಮಿ ಎಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೊಂಡಾಡಿದ್ದಾರೆ.
ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾದ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ.
ದುಬೈನಲ್ಲಿ ನಡೆದ ಈ ಪಂದ್ಯ ಎರಡೆರಡು ಸೂಪರ್ ಓವರ್‌ಗೆ ಸಾಕ್ಷಿಯಾಗುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ.
ಸೂಪರ್ ಓವರ್‌ಗೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು.
ಇದಕ್ಕುತ್ತರವಾಗಿ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸಹ 6 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿ ಪಂದ್ಯ ಟೈ ಮಾಡಿಕೊಂಡಿತು.
ಹೀಗಾಗಿ ಫಲಿತಾಂಶಕ್ಕಾಗಿ ಉಭಯ ತಂಡಗಳು ಸೂಪರ್ ಓವರ್ ಮೊರೆ ಹೋದವು.
ಈ ವೇಳೆ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕೇವಲ 5 ರನ್ ಗಳಿಸಿತು.
ಸುಲಭ ಗುರಿ ಪಡೆದ ಮುಂಬೈಗೆ ಪಂಜಾಬ್ ವೇಗಿ ಮೊಹಮ್ಮದ್ ಶಮಿ ಸಿಂಹಸ್ವಪ್ನವಾಗಿ ಕಾಡಿದರು. ಮಾತ್ರವಲ್ಲ ಶಮಿ ಕೂಡಾ ಕೇವಲ 5 ರನ್ ನೀಡಿದರು.
ಬಲಾಢ್ಯ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿಕಾಕ್ ಹಾಗೂ ರೋಹಿತ್ ಅವರ ಎದರು 5 ರನ್ ಕಾಪಾಡಿಕೊಳ್ಳುವಲ್ಲಿ ಶಮಿ ಯಶಸ್ವಿಯಾಗಿದ್ದು ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.
ಇದೀಗ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿಯನ್ನು ಗುಣಗಾನ ಮಾಡಿದ್ದಾರೆ.
ನನ್ನ ಪ್ರಕಾರ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್ ಮೊಹಮ್ಮದ್ ಶಮಿಗೆ ಸಲ್ಲಬೇಕು.
ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಎದುರು 6 ರನ್ ಡಿಫೆಂಡ್ ಮಾಡಿಕೊಳ್ಳುವುದು ನಿಜಕ್ಕೂ ಅದ್ಭುತ ಸಾಧನೆ.
ನಾನು ನೆಟ್ಸ್‌ನಲ್ಲಿ ಸಾಕಷ್ಟು ಬಾರಿ ಶಮಿ ಬೌಲಿಂಗ್ ಎದುರಿಸಿದ್ದೇನೆ. ಆದರೆ ಯಾರ್ಕರ್ ಎದುರಿಸುವುದು ಅಷ್ಟು ಸುಲಭವಲ್ಲ ಎಂದು ಗೇಲ್ ಕೊಂಡಾಡಿದ್ದಾರೆ
ಇನ್ನು ಮೊದಲ ಸೂಪರ್ ಓವರ್ ಟೈ ಆಗಿದ್ದರಿಂದ ಎರಡನೇ ಸೂಪರ್ ಓವರ್ ಬೌಲಿಂಗ್ ಜವಾಬ್ದಾರಿಯನ್ನು ಕ್ರಿಸ್ ಜೋರ್ಡನ್ ವಹಿಸಿಕೊಂಡು ಕೇವಲ 11 ರನ್ ನೀಡಿದರು.
ಬಳಿಕ ಗುರಿಯನ್ನು ಕ್ರಿಸ್ ಗೇಲ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ಅನಾಯಾಸವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಗೆಲುವು ತಂದಿತ್ತರು.
ಅಂದಹಾಗೆ ಅದ್ಭುತ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕೆ.ಎಲ್. ರಾಹುಲ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಮುಂಬೈ ವಿರುದ್ಧದ ಈ ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಕಿಂಗ್ಸ್ ಇಲೆವನ್ ಪಂಜಾಬ್ 6ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಕನಸ್ಸನ್ನು ಜೀವಂತವಾಗಿರಿಸಿಕೊಂಡಿದೆ.