ಕನ್ನಡಿಗ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಶೈಲಿಯನ್ನು ಮ್ಯಾಥ್ಯೂ ಹೇಡನ್‌ಗೆ ಹೋಲಿಸಿದ ಕ್ರಿಸ್ ಮೋರಿಸ್..!
ದುಬೈ: ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಆಕ್ರಮಣಕಾರಿ ಆಟದ ಮೂಲಕ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕನಾಗಿ ಆಡಲು ಪಡೆದ ದೇವದತ್ ಪಡಿಕ್ಕಲ್ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದಲೂ ಬಾಚಿಕೊಳ್ಳುವಲ್ಲಿ ಯಶಸ್ವಿಯಾದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಆಡಿದ ಮೊದಲ ಪಂದ್ಯದಲ್ಲೇ ಪಡಿಕ್ಕಲ್ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ನಾಯಕನ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ಬಳಿಕ ಪಡಿಕ್ಕಲ್ ಹಿಂತಿರುಗಿ ನೋಡಿದ್ದೇ ಇಲ್ಲ. ಇದೀಗ ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ಕೂಡಾ ಪಡಿಕ್ಕಲ್ ಆಟವನ್ನು ಆಸೀಸ್ ದಿಗ್ಗಜ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್‌ಗೆ ಹೋಲಿಸಿ ಗುಣಗಾನ ಮಾಡಿದ್ದಾರೆ.
ದೇವದತ್ ಪಡಿಕ್ಕಲ್ ಸದ್ಯ ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ಥ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕರ್ನಾಟಕದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಶೈಲಿ, ಆಸೀಸ್‌ನ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅವರಂತೆ ಇದೆ ಎಂದು ಆಲ್ರೌಂಡರ್ ಮೋರಿಸ್ ಹೇಳಿದ್ದಾರೆ.
ಶುಕ್ರವಾರ(ಅ.23)ರಂದು ನಡೆದ ವಚ್ರ್ಯುವಲ್ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಡಿಕ್ಕಲ್ ಬ್ಯಾಟಿಂಗ್ ವೇಳೆ ಆಯ್ಕೆ ಮಾಡುವ ಹೊಡೆತಗಳು ಹೇಡನ್ ರನ್ನು ನೆನಪಿಸುತ್ತದೆ. ಪಡಿಕ್ಕಲ್ ಆರಂಭದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಆಟ ನಿಜಕ್ಕೂ ಮೆಚ್ಚುವಂತದ್ದಾಗಿದೆ ಎಂದು ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕನ್ನಡಿಗನ ಆಟದ ಗುಣಗಾನ ಮಾಡಿದ್ದಾರೆ.
ಪಡಿಕ್ಕಲ್ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಹೇಡನ್ ಅವರಂತೆ ದೈತ್ಯ ಆಟಗಾರನಲ್ಲದಿದ್ದರೂ, ಬ್ಯಾಟಿಂಗ್ ಶೈಲಿ ಅವರಂತೆಯೇ ಇದೆ ಎಂದಿದ್ದಾರೆ.
ದೇವದತ್ ಪಡಿಕ್ಕಲ್ ಭಾರತ ಕ್ರಿಕೆಟ್ ತಂಡದ ಭವಿಷ್ಯದ ಆಶಾಕಿರಣ ಎಂದು ಕ್ರಿಸ್ ಮೋರಿಸ್ ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಅತ್ಯದ್ಭುತ ಆಟಗಾರ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ಯುವ ವೇಗಿಗಳಾದ ನವದೀಪ್ ಸೈನಿ ಹಾಗೂ ಮೊಹಮದ್ ಸಿರಾಜ್ ಪೂರ್ವಭಾವಿ ಅಭ್ಯಾಸವನ್ನು ಮೋರಿಸ್ ಮೆಚ್ಚಿಕೊಂಡಿದ್ದಾರೆ. ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವಾಗ ಸೈನಿ ನೆಟ್ ಬೌಲರ್ ಆಗಿದ್ದರು.
ಆಗ ರಾಕೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸೈನಿ ಇನ್ನೂ ಯಾಕೆ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ಆಶ್ಚರ್ಯವಾಗಿತ್ತು. ಈಗ ಸೈನಿ ಅಂತಾರಾಷ್ಟ್ರೀಯ ಆಟಗಾರನಾಗಿ ಬೆಳೆದಿರುವುದನ್ನು ನೋಡಿ ಖುಷಿಯಾಗುತ್ತಿದೆ ಎಂದು ಮೋರಿಸ್ ಹೇಳಿದ್ದಾರೆ.
ಸದ್ಯ ಕ್ರಿಸ್ ಮೋರಿಸ್ ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಮೊದಲ 5 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗಿದ್ದಾರೆ.
33 ವರ್ಷದ ಕ್ರಿಸ್ ಮೋರಿಸ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳಿಂದ ಹೊರಗುಳಿದಿದ್ದರು.