ಗಾಯದ ಮೇಲೆ ಮತ್ತೊಂದು ಬರೆ; CSK ಸ್ಟಾರ್ ಆಲ್ರೌಂಡರ್ ಟೂರ್ನಿಯಿಂದಲೇ ಔಟ್...!
ದುಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸದಾ ಒಂದಿಲ್ಲೊಂದು ವಿಘ್ನ ತಂದೊಡ್ಡುತ್ತಿದೆ. ಆರಂಭದಿಂದಲೂ ಕುಂಟುತ್ತಾ ಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಸಿಎಸ್‌ಕೆ ಈ ಬಾರಿ ಇಲ್ಲಿಯವರೆಗೆ 10 ಪಂದ್ಯಗಳನ್ನಾಡಿ 7ರಲ್ಲಿ ಸೋಲು ಹಾಗೂ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಧೋನಿ ಪಡೆಗೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಗಾಯದ ಸಮಸ್ಯೆಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ಪಾಳಯಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ.
ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ಸ್ಟಾರ್ ಆಟಗಾರರಾದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣ ನೀಡಿ ಟೂರ್ನಿಯಿಂದಲೇ ಹೊರಗುಳಿದಿದ್ದರು.
ಸುರೇಶ್ ರೈನಾ ಅನುಪಸ್ಥಿತಿ ಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕದ ಮೇಲೆ ಬಲವಾದ ಪೆಟ್ಟು ಬಿದ್ದಂತೆ ಆಗಿದ್ದು, ಸತತ ಸೋಲುಗಳಿಂದ ಧೋನಿ ಪಡೆ ಕಂಗಾಲಾಗಿ ಹೋಗಿದೆ.
ಬಹುತೇಕ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿದ 4 ಪಂದ್ಯಗಳನ್ನಾದರು ಗೆದ್ದು ಮಾನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವಾಗಲೇ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಹೌದು, ಸಿಎಸ್‌ಕೆ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬ್ರಾವೋ ಗ್ರೇಡ್ 1 ಹಂತದ ಬಲ ತೊಡೆಸಂದು ಗಾಯಕ್ಕೆ ತುತ್ತಾಗಿದ್ದು, ಗುರುವಾರದಂದು ಯುಎಇನಿಂದ ತೆರಳಲಿದ್ದಾರೆ ಎಂದು ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
ಇದೀಗ ಬ್ರಾವೋ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಸಂಪೂರ್ಣ ಗುಣಮುಖರಾಗಲು 2-3 ವಾರಗಳು ಬೇಕಾಗಬಹುದು ಎನ್ನಲಾಗಿದೆ.
ಅಕ್ಟೋಬರ್ 17ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಆಲ್ರೌಂಡರ್ ಡ್ವೇನ್ ಬ್ರಾವೋ ಗಾಯಕ್ಕೆ ತುತ್ತಾಗಿದ್ದರು.
ಈ ಪಂದ್ಯದಲ್ಲಿ ಡ್ವೇನ್ ಬ್ರಾವೋ ಕೇವಲ 3 ಓವರ್ ಬೌಲಿಂಗ್ ಮಾಡಲಷ್ಟೇ ಶಕ್ತವಾಗಿದ್ದರು, ಬ್ರಾವೋ 20ನೇ ಓವರ್ ಬೌಲಿಂಗ್ ಮಾಡಬೇಕಾಗಿತ್ತು, ಆದರೆ ನೋವು ಹೆಚ್ಚಾಗಿದ್ದರಿಂದ ಬ್ರಾವೋಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
ಸಿಎಸ್‌ಕೆ ಎದುರು ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 17 ರನ್ ಅಗತ್ಯವಿತ್ತು. ಬ್ರಾವೋ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡಿದ್ದರು.
ಜಡೇಜಾ ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಅಕ್ಷರ್ ಪಟೇಲ್ 3 ಸಿಕ್ಸರ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದಿತ್ತರು.