ಪತ್ರಿಕಾ ವಿತರಕರಿಗೆ ಅಸಂಘಟಿತ ಕಾರ್ಮಿಕರ ಮಾನ್ಯತೆ ಯಾವಾಗ?
ಇಂದು ಪತ್ರಿಕಾ ವಿತರಕರ ದಿನಾಚರಣೆ. ಹೀಗಿರುವಾಗ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಬೇಕು. ಪತ್ರಿಕೆ ಹಂಚಿಕೆ ಮಾಡುವವರಿಗೆ ಗುರುತಿನ ಚೀಟಿ ನೀಡಬೇಕು. ಪತ್ರಿಕೆ ಹಂಚುವಾಗ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಅಥವಾ ಅಪಘಾತವಾದರೆ ಸರ್ಕಾರದಿಂದ 5 ಲಕ್ಷ ರು. ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಪತರಿಕಾ ವಿತರಕರಿಗೂ ಕೊಡಬೇಕು. ಪತ್ರಿಕೆ ವಿತರಕರನ್ನು ಮೊದಲು ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಅವರು ಸರ್ಕಾರವನ್ನು ಒತ್ತಾಯ ಕೇಳಿ ಬಂದಿದೆ.
ಸುದ್ದಿಗಳ ಪ್ರಕಟಣೆಯಲ್ಲಿ ಸತ್ಯನಿಷ್ಠೆ ಉಳಿಸಿಕೊಂಡಿರುವುದು ದಿನಪತ್ರಿಕೆಗಳು ಮಾತ್ರ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಅಭಿಪ್ರಾಯಪಟ್ಟಿದೆ. ಇಂತಹ ಸತ್ಯ ದರ್ಶನದ ಸುದ್ದಿ ಹೊತ್ತ ಪತ್ರಿಕೆಗಳನ್ನು ಕೊರೋನಾ ಸಂಕಷ್ಟದ ನಡುವೆಯೂ ಚಳಿ, ಮಳೆ ಎನ್ನದೆ ಮನೆ-ಮನೆಗೆ ತಲುಪಿಸುವ ಕಾಯಕ ಜೀವಿಗಳು ಪತ್ರಿಕೆ ವಿತರಕರು. ಪತ್ರಿಕಾ ಮಾಧ್ಯಮದ ಅತಿ ಮುಖ್ಯ ಕೊಂಡಿಯಾದ ಈ ಶ್ರಮಜೀವಿಗಳ ಬಗ್ಗೆ ಮಾತ್ರ ಸರ್ಕಾರದ ತಾತ್ಸಾರ ಮುಂದುವರೆದಿದೆ.
ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲೂ ಪತ್ರಿಕೆಗಳನ್ನು ಮನೆ-ಮನೆಗೆ ತಲುಪಿಸಲು ಪ್ರಾಮಾಣಿಕತೆಯಿಂದ ದುಡಿಯುವ ಪತ್ರಿಕಾ ವಿತರಕರು ತಮ್ಮನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಎಂದು ಮನವಿ ಮಾಡಿ ಎಂದು ಕೇಳಿ ಎರಡು ವರ್ಷವಾಗಿದ್ದರೂ ಸರ್ಕಾರ ಈ ಬಗ್ಗೆ ಇದುವರೆಗೂ ಕ್ಯಾರೆ ಎಂದಿಲ್ಲ.
ಅಷ್ಟೆಅಲ್ಲ, 2018ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕೆ ವಿತರಕರ ಕ್ಷೇಮ ನಿಧಿಗೆ 2 ಕೋಟಿ ರು. ಮೀಸಲಿಟ್ಟು ಆದೇಶಿಸಿದ್ದರು. ಆದರೆ, ಇದು ಘೋಷಣೆಗಷ್ಟೇ ಸೀಮಿತವಾಗಿದ್ದು, ಹಬ್ಬ-ಉತ್ಸವ, ಚಳಿ-ಮಳೆ ಎನ್ನದೆ ನಿದ್ದೆಗೆಟ್ಟು ಶ್ರಮಿಸುವ ಪತ್ರಿಕೆ ವಿತರಕರಿಗೆ ಈವರೆಗೂ ಸರ್ಕಾರ ಯಾವುದೇ ಕನಿಷ್ಠ ಸೌಲಭ್ಯವನ್ನೂ ಒದಗಿಸಿಲ್ಲ
ಹೀಗಾಗಿ ಇನ್ನಾದರೂ ಕಾರ್ಮಿಕ ಇಲಾಖೆಯು ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಗುರುತಿಸಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು. ಕೊರೋನಾ ಸಂಕಷ್ಟದಿಂದ ನರಳುತ್ತಿರುವ ಈ ಸಮುದಾಯಕ್ಕೆ ಸರ್ಕಾರದ ಕನಿಷ್ಠ ಸೌಲಭ್ಯಗಳು ತಲುಪುವಂತೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಪತ್ರಿಕೋದ್ಯಮ. ಪತ್ರಿಕೆಗಳ ಪ್ರಮುಖ ಆಧಾರ ಸ್ತಂಭ ಪತ್ರಿಕಾ ವಿತರಕರು. ಇವರೂ ಕಾಯಕನಿಷ್ಠ ಸೇನಾನಿಗಳನ್ನು ಕಾರ್ಮಿಕ ಇಲಾಖೆ ಇನ್ನಾದರೂ ಅಸಂಘಟಿತ ಕಾರ್ಮಿಕರು ಎಂದು ಗುರುತಿಸಬೇಕು. ಅವರಿಗೆ ತಲುಪಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಆಗ್ರಹ ಮಾಡಿದೆ.
ನಿಜ ಅರ್ಥದ ಕೊರೋನಾ ವಾರಿಯರ್ಸ್:
ಪತ್ರಿಕಾ ವಿತರಕರು ನಿಜವಾದ ಕೊರೋನಾ ಯೋಧರು. ಪತ್ರಿಕೆಗಳಿಂದ ಕೊರೋನಾ ಸೋಂಕು ಹರಡುತ್ತದೆ ಎಂಬ ಊಹಾಪೋಹ ಹಬ್ಬಿದಾಗಲೂ ಹೆದರದೆ ಓದುಗರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸಿದ್ದರು.
ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ದುಡಿಮೆಯಿಂದ ವಂಚಿತರಾದ ಸಮಾಜದ ವಿವಿಧ ವರ್ಗಗಳಿಗೆ ಹಾಗೂ ವೃತ್ತಿಯವರಿಗೆ ಸರ್ಕಾರಗಳು ಆರ್ಥಿಕ ಸಹಾಯ, ಸಹಕಾರ ನೀಡಿ ಕೈಹಿಡಿದವು. ಆದರೆ, ಪತ್ರಿಕೆ ವಿತರಕರನ್ನು ಮರೆತಿದ್ದು ಮಾತ್ರ ವಿಪರ್ಯಾಸ.
ಕೈಸೇರದ ಸಹಾಯ ಧನ:
ವರ್ಷದಲ್ಲಿ ಕೇವಲ ನಾಲ್ಕು ದಿನ ಮಾತ್ರ ರಜೆ ಪಡೆದು ದುಡಿಯುವ ಪತ್ರಿಕಾ ವಿತರಕರು ಅಸಂಘಟಿತರು. ಹೀಗಾಗಿಯೇ ಇವರ ಸಂಕಷ್ಟ, ನೋವು, ದುಃಖ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ.
ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪತ್ರಿಕಾ ವಿತರಕರ ಕುಂದುಕೊರತೆ ಕುರಿತು ಪರಿಗಣಿಸಿಲ್ಲ. ಖುದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಸಂಘಟಿತ ಕಾರ್ಮಿಕರೆಂದು ಗುರುತಿಸುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
News paper_ unorganised labou
ಮಳೆ, ಗಾಳಿ, ಚಳಿಯೆನ್ನದೆ ಪ್ರತಿದಿನ ಜನರು ಏಳುವುದಕ್ಕೂ ಮೊದಲೇ ದಿನಪತ್ರಿಕೆ ಹಂಚುವ ಪತ್ರಿಕಾ ವಿತರಕರು ಬೆಂಗಳೂರಿನಲ್ಲಿ ಶುಕ್ರವಾರ ಕರ್ತವ್ಯದಲ್ಲಿ ತಲ್ಲೀನ.
ಕೊರೋನಾ ಮಹಾಮ್ಮಾರಿ ಎಷ್ಟೋ ವಿತರಕರನ್ನು ಬಲಿ ಪಡೆದಿದೆ. ಪತ್ರಿಕೆ ವ್ಯಾಪಾರ ಶೇ.60 ರಷ್ಟುಕಡಿಮೆಯಾಗಿದೆ. ಶೇ.40ರಷ್ಟುಆದಾಯದಲ್ಲಿ ಹುಡುಗರಿಗೆ ಸಂಬಳ, ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಭರಿಸಿ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ ಎಂದು ವಿತರಕರು ಅಳಲು ತೋಡಿಕೊಳ್ಳುತ್ತಾರೆ.
ಕಡು ಬಡತನ ಹೊಂದಿರುವ ಪತ್ರಿಕಾ ವಿತರಕರಿಗೆ ಈವರೆಗೂ ಸರ್ಕಾರ ಬಿಡಿಗಾಸಿನ ನೆರವು ನೀಡಿಲ್ಲ. ಯಾವುದೇ ಭದ್ರತೆ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸರ್ಕಾರ ಅಸಂಘಟಿತ ವಲಯವನ್ನು ಗುರುತಿಸಿ ಸವಲತ್ತು ನೀಡಿದಂತೆ ಈ ಅಸಂಘಟಿತರನ್ನು ಗುರುತಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಎಂದು ಒತ್ತಾಯಿಸಿದರು.