ಕಾಂಗ್ರೆಸ್‌ನಲ್ಲಿ ಹೆಚ್ಚಾಯಿತು ಬಿರುಕು; ಬಂಗಾಳ ಚುನಾವಣಾ ಪ್ರಚಾರದಿಂದ G23 ನಾಯಕರಿಗೆ ಕೊಕ್!
ಕಾಂಗ್ರೆಸ್‍ನೊಳಗೆ ಅದರಲ್ಲೂ ಗಾಂಧಿ ಪರಿವಾರದ ವಿರುದ್ಧ ಹೋರಾಟ ಆರಂಭಗೊಂಡು ಹಲವು ದಿನಗಳೇ ಉರುಳಿದೆ. ಹಿರಿಯ ನಾಯಕರು ಈಗಾಗಲಿ ಜಿ23 ಸಭೆ ನಡೆಸಿ ಕಾಂಗ್ರೆಸ್‌ನಲ್ಲಿ ಬದಲಾವಣೆ ಬೇಕು ಎಂದು ಆಗ್ರಹಿಸಿದ್ದಾರೆ. ಈ ಹೋರಾಟಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಇದೀಗ ಬಂಗಾಳ ಚುನಾವಣೆ ಪ್ರಚಾರದಿಂದ ಡಿ23 ನಾಯಕರಿಗೆ ಕೊಕ್ ನೀಡಿದೆ.
ಪಶ್ಚಿಮ ಬಂಗಾಳ ಚುನಾವಣೆಗೆ ಟಿಎಂಸಿ, ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ಅಷ್ಟೇ ಪ್ರಯತ್ನ ಮಾಡುತ್ತಿದೆ. ಇದೀಗ ಬಂಗಾಳ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದೆ.
ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆಗೆ 30 ಸ್ಟಾರ್ ಪ್ರಚಾರಕ ಲಿಸ್ಟ್ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಿಂದ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಗಾಂಧಿ ಪರಿವಾರದ ವಿರುದ್ಧ ಧನಿ ಎತ್ತಿರುವ ನಾಯಕರನ್ನು ಹೊರಗಿಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್, ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ ವಾದ್ರಾ, ಸಚಿನ್ ಪೈಲೆಟ್, ನವಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ, ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಕೆಲ ಪ್ರಮುಖ ನಾಯಕರನ್ನು ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸೇರ್ಪಡೆಗೊಳಿಸಿದೆ.
ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಕೆ ವೇಣುಗೋಪಾಲ್ ಸ್ಟಾರ್ ಪ್ರಚಾರಕ ಲಿಸ್ಟ್‌ನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಈ ಪತ್ರ ಇದೀಗ ಕಾಂಗ್ರೆಸ್ ನಡುವಿನ ಬಿರುಕನ್ನು ಮತ್ತಷ್ಟು ಹೆಚ್ಚಿಸಿದೆ.
ಕಾಂಗ್ರೆಸ್ ಕೇವಲ ಗಾಂಧಿ ಪರಿವಾರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಅನ್ನೋ ಆರೋಪದ ನಡುವೆ ಮತ್ತೆ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ
ಗುಲಾಮ್ ನಬಿ ಆಝಾದ್, ಕಪಿಲ್ ಸಿಬಲ್, ಆನಂದ್ ಶರ್ಮಾ, ಎಂ ವೀರಪ್ಪ ಮೊಯಿಲಿ, ಪೃಥ್ವಿ ರಾಜ್ ಚೌವ್ಹಾಣ್, ಶಶಿ ತರೂರ್ ಸೇರಿದಂತೆ ಪ್ರಮುಖ ನಾಯಕರನ್ನು ಸ್ಟಾರ್ ಪ್ರಚಾರಕ ಲಿಸ್ಟ್‌ನಿಂದ ದೂರವಿಡೋ ಮೂಲಕ ಜಿ23 ನಾಯಕರನ್ನು ಕಾಂಗ್ರೆಸ್ ಮತ್ತೆ ದೂರವಿಟ್ಟಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹಿರಿಯ ನಾಯಕರು ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದರು. ಆದರೆ ಇಲ್ಲೀವರೆಗೆ ಹಿರಿಯ ನಾಯಕರ ಅಹವಾಲನ್ನು ಕಾಂಗ್ರೆಸ್ ಕೇಳಿಲ್ಲ.
ಪಶ್ಚಿಮ ಬಂಗಾಳ ಸೇರಿದಂತೆ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಬಲಪಡಿಸುವ ಗುರಿ ಇಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಒಳಜಗಳ ಇದೀಗ ಮುಳುವಾಗಿ ಪರಿಣಮಿಸಿದೆ.