ಮುಂದುವರಿದ ರಕ್ಷಣಾ ಕಾರ್ಯ; 12 ಮೃತದೇಹ ಪತ್ತೆ, ಸಾವಿನ ಸಂಖ್ಯೆ 50ಕ್ಕೇರಿಕೆ!
ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹದಲ್ಲಿ ನಾಪತ್ತೆಯಾಗಿರುವ ಕಾರ್ಮಿಕರು, ಸಿಬ್ಬಂದಿಗಳ ಶೋಧ ಹಾಗೂ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸತತ ಒಂದು ವಾರದಿಂದ ರಕ್ಷಣಾ ಕಾರ್ಯ ಮುಂದುವರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಫೆ.7ರ ಭಾನುವಾರ ಶಾಂತವಾಗಿದ್ದ ಉತ್ತರಖಂಡದ ಚಿಮೋಲಿ ಜಿಲ್ಲೆಯ ಉಗ್ರಸ್ವರೂಪ ತಾಳಿತ್ತು. ಹಿಮಸ್ಫೋಟಗೊಂಡು ಪ್ರವಾಹವಾಗಿ ಜಲಾಶಯ, ವಿದ್ಯುತ್ ಸ್ಥಾವರ ಘಟಕವನ್ನು ಧ್ವಂಸಗೊಳಿಸಿತ್ತು.
ವಿದ್ಯುತ್ ಸ್ಥಾವರ ಹಾಗೂ ನದಿ ಪಾತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಕ್ಷಣಮಾತ್ರದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ತಪೋವನ ಸುರಂಗದಲ್ಲಿ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದರು.
ಕಳೆದ ಒಂದು ವಾರದಿಂದ ರಕ್ಷಣಾ ಕಾರ್ಯ ಮುಂದುವರಿಸಿರುವ ರಕ್ಷಣಾ ತಂಡ ತಪೋವನ ಸುರಂಗದಿಂದ 12 ಮೃತದೇಹ ಹೊರಕ್ಕೆ ತೆಗೆದಿದೆ. ಈ ಮೂಲಕ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಉತ್ತರಖಂಡ ದುರಂತದಲ್ಲಿ ಇನ್ನೂ ಸುಮಾರು 160 ಮಂದಿ ಕಾಣೆಯಾಗಿದ್ದಾರೆ. ಉತ್ತರಖಂಡ ಪೊಲೀಸ್, SDRF ಹಾಗೂ NDRF ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ವೈದ್ಯರ ತಂಡ ಹಾಗೂ ಹೆಲಿಕಾಪ್ಟರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ತಪೋವನ ಸುರಂಗ, ಸೇರಿದಂತೆ ಪ್ರವಾಹದ ಕೆಸರು ನೀರಿನೊಳಗೆ ಯಾರಾದರೂ ಬದುಕಿಳಿದಿದ್ದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಈ ವ್ಯವಸ್ಥೆ ಮಾಡಲಾಗಿದೆ.
ತೋಪವನ್ ಸುರಂಗದೊಳಗೆ ಇನ್ನೂ 30 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ರಕ್ಷಣಾ ತಂಡ ಹೇಳಿದೆ. ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ರಕ್ಷಣ ಕಾರ್ಯಕ್ಕೂ ಅಡ್ಡಿಯಾಗಿದೆ.
ದುರಂತದಲ್ಲಿ ಸಾವನ್ನಪ್ಪಿದ ಹಾಗೂ ಕಾಣೆಯಾದವರ ಕುಟುಂಬಸ್ಥ ಅಳಲು ಮುಗಿಲು ಮುಟ್ಟಿದೆ. ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯ ನಡೆಸುವಂತೆ ಆಗ್ರಹಿಸಿದ್ದಾರೆ.
ಇತ್ತ ನೀರಿನ ಮಟ್ಟ ಏರಿರುವ ಕಾರಣ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಮನವಿ ಮಾಡಲಾಗಿದೆ.