ಜನಪ್ರಿಯತೆ, ಸಮ್ಮಿಲನ, ಬ್ಯುಸಿನೆಸ್, ವೈರಲ್ ಕಥೆ; ಮಹಾಕುಂಭದಲ್ಲಿನ ಮರೆಯಲಾಗದ 9 ಮೊಮೆಂಟ್ಸ್
45 ದಿನಗಳ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಈ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಬಾಲಕಿಗೆ ಬಾಲಿವುಡ್ ಬಾಗಿಲು ತೆರೆದಿದೆ, ಡಿಜಿಟಲ್ ಸ್ನಾನ ಮಾಡಿಸುವ ಮೂಲಕ ವ್ಯಕ್ತಿಯೊಬ್ಬರು ಹಣ ಸಂಪಾದಿಸಿದ್ದಾರೆ, ಇನ್ನೂ ಹಲವು ವಿವಾದಗಳು ಸೃಷ್ಟಿಯಾಗಿವೆ.

45 ದಿನದ ಮಹಾಕುಂಭ ಮೇಳ ಮುಕ್ತಾಯವಾಗಿದೆ. ಈ ಮಹಾಕುಂಭ ಮೇಳದಲ್ಲಿ ಧಾರ್ಮಿಕ ಆಚರಣೆ ಜೊತೆ ಹಲವರು ಮುನ್ನಲೆಗೆ ಬಂದಿದ್ದರು. ಕೆಲವರು ವಿಶೇಷ ಐಡಿಯಾಗಳಿಂದ ಹಣ ಸಂಪಾದಿಸಿದ್ರೆ, ರುದ್ರಾಕ್ಷಿ ಮಾರುತ್ತಿದ್ದ ಬಾಲಕಿಗೆ ಬಾಲಿವುಡ್ ಬಾಗಿಲು ತೆರೆದಿದೆ.
ಆಕರ್ಷಕ ಕಣ್ಣುಗಳ ಸುಂದರಿ ಮೊನಾಲಿಸಾ
ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಈ ಬಾರಿ 16 ವರ್ಷದ ರುದ್ರಾಕ್ಷಿ ಮಾಲೆ ಮಾರುವ ಮೊನಾಲಿಸಾ ಸಖತ್ ಫೇಮಸ್ ಆದರು. ಮೊನಾಲಿಸಾ ಅವರ ಆಕರ್ಷಕ ಕಣ್ಣುಗಳು ಇಡೀ ದೇಶದ ಗಮನ ಸೆಳೆದ ಸಹಜ ಸುಂದರಿ. ಸದ್ಯ ಮೊನಾಲಿಸಾ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಸಿನಿಮಾಗಾಗಿ ಮೊನಾಲಿಸಾ ಡೈಲಾಗ್ ಪ್ರ್ಯಾಕ್ಟಿಸ್ ಮಾಡುವ ವಿಡಿಯೋ ಸಹ ವೈರಲ್ ಆಗಿತ್ತು.
ಐಐಟಿ ಬಾಬಾ ಅಭಯ್ ಸಿಂಗ್
ಏರೋಸ್ಪೇಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಆಧ್ಯಾತ್ಮದತ್ತ ಆಕರ್ಷಿತರಾದ ಐಐಟಿ ಬಾಬಾ ಅಭಯ್ ಸಿಂಗ್ ಕೆಲವೇ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಂಡವರು. ಸಂದರ್ಶನದಲ್ಲಿ ತಾವು ಹೇಗೆ ಅಧ್ಯಾತ್ಮದತ್ತ ಬಂದೆ ಎಂಬುದನ್ನು ಹೇಳಿಕೊಂಡಿದ್ದರು. ಇದಾದ ಬಳಿಕ ಅಭಯ್ ಸಿಂಗ್ ಕುರಿತು ವಿಷಯಗಳು ಒಂದೊಂದೆ ಮುನ್ನಲೆಗೆ ಬರಲು ಆರಂಭಿಸಿವೆ. ಇತ್ತೀಚೆಗೆ ಮಾಧ್ಯಮ ಚರ್ಚೆಯಲ್ಲಿ ಹಲ್ಲೆಗೊಳಗಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಯ್ ಸಿಂಗ್ ವಿದೇಶದಲ್ಲಿಇಂಜಿನಿಯರಿಂಗ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಡಿಜಿಟಲ್ ಇಂಡಿಯಾದ ಡಿಜಿಟಲ್ ಬಾತಿಂಗ್
ವಿಶೇಷ ಕಲ್ಪನೆ ಮೂಲಕ ಹಣ ಸಂಪಾದನೆ ಮಾಡಿದ ವ್ಯಕ್ತಿ ದೀಪಕ್ ಗೋಯಲ್. ತ್ರಿವೇಣಿ ಸಂಗಮಕ್ಕೆ ಆಗಮಿಸಲು ಸಾಧ್ಯವಾಗದ ಜನರ ಫೋಟೋಗಳನ್ನು ನದಿಯಲ್ಲಿ ಮುಳುಗಿಸಿ ಸ್ನಾನ ಮಾಡಿಸುವ ಮೂಲಕ ಹಣ ಗಳಿಸುವ ಮೂಲಕ ಫೇಮಸ್ ಆದರು. ಡಿಜಿಟಲ್ ಸ್ನಾನಕ್ಕಾಗಿ ಇವರ ವಾಟ್ಸಪ್ ಸಂಖ್ಯೆ ಫೋಟೋ ಮತ್ತು ಹಣ ಕಳುಹಿಸಬೇಕು. ನಂತರ ಫೋಟೋ ಪ್ರಿಂಟ್ ತೆಗೆದು ನದಿಯಲ್ಲಿ ಮುಳುಗಿಸಿ ವಿಡಿಯೋ ಕಳುಹಿಸುತ್ತಿದ್ದರು. ಒಂದು ಫೋಟೋಗೆ 1000-1200 ರೂಪಾಯಿವರೆಗೆ ಚಾರ್ಜ್ ಮಾಡಿದ್ದ
ಓ ಹೆಣ್ಮಗು.. ಓ ಹೆಣ್ಮಗು
ಮಹಿಳೆಯೊಬ್ಬರು ತ್ರಿವೇಣಿ ಸಂಗಮಕ್ಕೆ ಆಗಮಿಸಿ ಗಂಡನಿಗೆ ವಿಡಿಯೋ ಕಾಲ್ ಮಾಡಿದ್ದರು. ನಂತರ ಮೊಬೈಲ್ ಮೂರು ಬಾರಿ ನದಿಯಲ್ಲಿ ಮುಳುಗಿಸಿ ಗಂಡನ ಪಾಪ ತೊಳೆದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಓ ಹೆಣ್ಮಗು... ಓ ಹೆಣ್ಮಗು ಎಂದು ಕಮೆಂಟ್ ಮಾಡಿದ್ದರು. ಇದೇ ರೀತಿ ತರೇಹವಾರಿ ಕಮೆಂಟ್‌ಗಳು ಬಂದಿದ್ದವು
AI ಜನರೇಟೆಡ್ ವಿಡಿಯೋಗಳು
ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ತೋರಿಸುವ ಹಲವು ಸೆಲಿಬ್ರಿಟಿಗಳ AI ಜನರೇಟೆಡ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಸಿದ್ದವು. ಮಾರ್ಕ್ ಜುಕರ್‌ಬರ್ಗ್, ಎಲಾನ್ ಮಸ್ಕ್, ಸುಂದರ ಪಿಚೈ, ಗೌತಮ್ ಅದಾನಿ, ಪ್ರಕಾಶ್ ರೈ, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು.
ನಾಸಾದಿಂದ ಮಹಾಕುಂಭದ ಅದ್ಭುತ ದೃಶ್ಯ
ಪ್ರಯಾಗ್‌ರಾಜ್ ಮಹಾಕುಂಭ ಮೇಳದ ಅದ್ಭುತ ದೃಶ್ಯಗಳ ಫೋಟೋಗಳನ್ನು ನಾಸಾ ಬಾಹ್ಯಾಕಾಶದಿಂದ ಸೆರೆ ಹಿಡಿದುಕೊಂಡಿತ್ತು. ನಾಸಾದ ಬಾಹ್ಯಾಕಾಶ ವಿಜ್ಞಾನಿ ಡಾನ್ ಪೆಟ್ಟಿಟ್ ಫೋಟೋ ಹಂಚಿಕೊಂಡಿದ್ದರು. ಹಾಗೆ ವಿಮಾನದ ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರು ಕ್ಲಿಕ್ಕಿಸಿದ್ದ ಮಹಾಕುಂಭದ ಪಕ್ಷಿ ನೋಟವುಳ್ಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಸಾಕು ನಾಯಿ ಜೊತೆ ಪುಣ್ಯಸ್ನಾನ
ಝೋರ್ವಾರ ಎಂಬವರು ತಮ್ಮ ಸಾಕು ನಾಯಿಯೊಂದಿಗೆ ಪುಣ್ಯಸ್ನಾನ ಮಾಡಿದ್ದ ಕ್ಯೂಟ್ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಜರ್ಸಿಗೆ ತೀರ್ಥಸ್ನಾನ ಮಾಡಿಸಿದ್ದರು. ಇನ್ನು ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹಾರೈಸಿ ಅವರ ಅಭಿಮಾನಿಗಳು ಫೋಟೋ ಹಿಡಿದು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದರು.
ಸ್ನೇಹಿತರ ಸಮ್ಮಿಲನ
ಈ ಬಾರಿಯ ಮಹಾಸಂಗಮದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೀವ್ ಕುಮಾರ್ ಸಿಂಗ್ ಅವರಿಗೆ ಬಾಲ್ಯದ ಗೆಳತಿ 37 ವರ್ಷಗಳ ಬಳಿಕ ಭೇಟಿಯಾಗಿದ್ದರು. 37 ವರ್ಷಗಳ ಬಳಿಕ ಭೇಟಿಯಾದ ಬಾಲ್ಯಸ್ನೇಹಿತೆ ಜೊತೆ ಸಂಜೀವ್ ಕುಮಾರ್ ಸಿಂಗ್ ಕ್ಲಿಕ್ಕಿಸಿಕೊಂಡಿದ್ದ ಸೆಲ್ಪಿ ವೈರಲ್ ಆಗಿತ್ತು. ಇದೇ ರೀತಿ ವ್ಯಕ್ತಿಯೊಬ್ಬರು 25 ವರ್ಷದ ಬಳಿಕ ಕುಟುಂಬಸ್ಥರನ್ನು ಭೇಟಿಯಾಗಿದ್ದರು.
ಮಮತಾ ಕುಲಕರ್ಣಿ
90ರ ದಶಕದ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅಖಾಡದ ಮುಖ್ಯಸ್ಥೆಯಾಗುವ ಮೂಲಕ ವಿವಾದಕ್ಕೂ ಕಾರಣವಾಗಿದ್ದರು. ನಂತರ ಮಮತಾ ಕುಲಕರ್ಣಿ ಅವರನ್ನು ಅಖಾಡದ ಮುಖ್ಯಸ್ಥೆಯ ಸ್ಥಾನದಿಂದ ವಜಾಗೊಳಿಸಲಾಗಿತ್ತು.