2 ವರ್ಷದ ಲವ್, ಪ್ರೇಯಸಿ ಕಿಡ್ನಿ ಮಾರಿ ಪ್ರಿಯತಮ ಪರಾರಿ!
ಕೇರಳದ ಕೊಚ್ಚಿಯ ಮಹಿಳೆಯೊಬ್ಬರು ತಮ್ಮ ಲಿವ್ ಇನ್ ರಿಲೇಷನ್‌ಶಿಪ್‌ನ ಪಾರ್ಟ್ನರ್ ತನಗೆ ವಂಚಿಸಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನು ಮಾರಿ ಬಂದ ಹಣವನ್ನು ಕೊಡದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈವರೆಗೂ ಆರೋಪಿಯನ್ನು ಬಂಧಿಸಿಲ್ಲ.
ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನ ಪಾರ್ಟ್ನರ್ ವರ್ಷದ ಹಿಂದೆ ಬಲವಂತವಾಗಿ ತನ್ನ ಕಿಡ್ನಿ ಮಾರಾಟ ಮಾಡಿಸಿದ್ದ. ಈಗ ಆತ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ಕೊಟ್ಟಿದ್ದಾಳೆ.
ಆರೋಪಿ ಕಿಡ್ನಿಯನ್ನು 8 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಆದರೆ ಈಗ ಮೋಸ ಮಾಡಿ ಈ ತಿಂಗಳ ಆರಂಭದಲ್ಲಿ ಹಣದೊಂದಿಗೆ ಓಡಿಹೋಗಿದ್ದಾನೆ ಎಂದು 43 ವರ್ಷದ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಮಾಧ್ಯಮಗಳು ಪ್ರಕಾರ, ಲಿವ್ ಇನ್ ರಿಲೇಷನ್‌ಶಿಪ್‌ನ ಪಾರ್ಟ್ನರ್ ಮೊಹಮ್ಮದ್ ರನೀಶ್ ತನ್ನ ಕಿಡ್ನಿಯನ್ನು 8 ಲಕ್ಷ ರೂ.ಗೆ ಮಾರಾಟ ಮಾಡುವಂತೆ ಒತ್ತಡ ಹೇರಿದ್ದ ಎಂದು ಸಂತ್ರಸ್ತೆ ಸೋಫಿಯಾ ಹೇಳಿರುವುದಾಗಿ ವರದಿ ಮಾಡಿವೆ. ಸೋಫಿಯಾ ಪ್ರಸ್ತುತ ಕೇರಳದ ವಾಝಕ್ಕಲಾದ ಹಾಸ್ಟೆಲ್ ನಲ್ಲಿ ತಂಗಿದ್ದಾರೆ.
ಮುಹಮ್ಮದ್ ರನೀಶ್ ಕಿಡ್ನಿ ಮಾರಾಟ ಮಾಡಲು ನನ್ನನ್ನು ಒಪ್ಪಿಸಿದ್ದರು ಅಲ್ಲದೇ ಇದು ನಮ್ಮ ಹಣದ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಹೇಳಿದ್ದರು. ಹೀಗಾಗಿ ತಾನು 4 ಏಪ್ರಿಲ್ 2019 ರಂದು ಶಸ್ತ್ರಚಿಕಿತ್ಸೆ ಮಾಡಿಸಿ ಕಿಡ್ನಿ ಮಾರಾಟ ಮಾಡಿದ್ದೆ ಎಂದು ಸೋಫಿಯಾ ತಿಳಿಸಿದ್ದಾರೆ.
ತನ್ನ ಸಂಗಾತಿ ಮತ್ತು ಕಿಡ್ನಿ ಪಡೆಯುವವರ ನಡುವೆ ಒಪ್ಪಂದವಾಗಿತ್ತು. ಇದರಂತೆ ಹಣವನ್ನು ತನ್ನ ಲವರ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. ಮೊಹಮ್ಮದ್ ರಾನೀಶ್ ಜುಲೈ 6 ರಂದು ಮನೆ ತೊರೆದರು ಆದರೆ ಆ ನಂತರ ಮನೆಗೆ ಮರಳಲಿಲ್ಲ ಎಂದು ಸೋಫಿಯಾ ಹೇಳಿದ್ದಾರೆ.
ತಾನು ನಾಲ್ಕನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದೇನೆ. ನನ್ನ ಸ್ವಂತ ಇಚ್ಛೆಯಿಂದ ಮೂತ್ರಪಿಂಡವನ್ನು ನಾನು ದಾನ ಮಾಡಿದ್ದೇನೆ ಎಂದು ಸಾಬೀತುಪಡಿಸಲು ಮೊಹಮ್ಮದ್ ರನೀಶ್ ದಾಖಲೆಗಳನ್ನು ಸಿದ್ಧಪಡಿಸಿದ್ದರು ಎಂದು ಸೋಫಿಯಾ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾವು ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಆರೋಪಿಯ ಫೋನ್ ಸ್ವಿಚ್ ಆಫ್ ಆಗಿದೆ.