1 ಸಾವಿರ ಟನ್ ಚಿನ್ನ ಹೂತಿಟ್ಟ ಕನಸು ಬಿದ್ದಿದ್ದ ಶೋಭನ್ ಸರ್ಕಾರ್ ನಿಧನ!
ಸಾಧು ಶೋಭನ್ ಸರ್ಕಾರ್ ಇಂದು ಬುಧವಾರ ಸಾವನ್ನಪ್ಪಿದ್ದಾರೆ. ಇವರ ನಿಧನದಿಂದ ಭಕ್ತರಲ್ಲಿ ಶೋಕ ಮಡುಗಟ್ಟಿದೆ. ಶಿವಲಿ ಕ್ಷೇತ್ರದ ಬೈರಿಯಲ್ಲಿರುವ ಅವರ ಆಶ್ರಮದಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಆಶ್ರಮದತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಸಾಧುಗೆ ಬಿದ್ದಿದ್ದ ಚಿನ್ನದ ನಿಧಿ ಕನಸಿನ ಆಧಾರದ ಮೇರೆಗೆ ಪುರಾತತ್ವ ಇಲಾಖೆ ಉನ್ನಾವ್‌ನ ಖೇಡಾದಲ್ಲಿ ಶೋಧ ಕಾರ್ಯ ನಡೆಸಿತ್ತೆಂಬುವುದು ಉಲ್ಲೇಖನೀಯ. ಶೋಭನ್ ಸರ್ಕಾರ್, ಫತೇಪುರ್‌ನ ರೀವಾ ನರೇಶ್ ಕೋಟೆಯಲ್ಲಿ ಶಿವ ಸ್ಮಾರಕದ ಬಳಿ ಒಂದು ಸಾವಿರ ಟನ್ ಚಿನ್ನ ಇದೆ ಎಂಬ ಕನಸು ಬಿದ್ದಿರುವುದಾಗಿ ಹೇಳಿದ್ದರು.
ಶೋಭನ್ ಸರ್ಕಾರ್ ತನಗೆ ಕನಸಿನಲ್ಲಿ ಫತೇಪುರ್‌ನ ರೀವಾ ನರೇಶ್ ಕೋಟೆಯಲ್ಲಿ ಶಿವ ಸ್ಮಾರಕದ ಬಳಿ ಒಂದು ಸಾವಿರ ಟನ್ ಚಿನ್ನ ಇದೆ ಎಂಬ ವಿಚಾರ ಗೊತ್ತಾಗಿದೆ ಎಂದು ಹೆಳಿ ಸುದ್ದಿಯಾಗಿದ್ದರು. ಇದಾದ ಬಳಿಕ ಭಾರತೀಯ ಪುರಾತತ್ವ ಇಲಾಖೆ ಇಲ್ಲಿ ಅಗೆಯುವ ಮೂಲಕ ಶೋಧ ನಡೆಸಿತ್ತು.
ಸರ್ಕಾರ ಇವರ ಕನಸು ನಿಜವಾಗಿರಬಹುದೆಂದು ಭಾವಿಸಿ ನಿಧಿ ಹುಡುಕಲು ಭೂಮಿ ಅಗೆಯಲು ಆರಂಭಿಸಿತ್ತು. ಆದರೆ ಅನೇಕ ದಿನ ಈ ಶೋಧ ಕಾರ್ಯ ಮುಂದುವರೆದರೂ ನಿಧಿ ಸಿಕ್ಕಿರಲಿಲ್ಲ. ಈ ವಿಚಾರವಾಗಿ ಕೇಂದ್ರ ಹಾಗೂ ಪ್ರದೇಶ ಸರ್ಕಾರ ಭಾರೀ ಟೀಕೆ ಎದುರಿಸಿತ್ತು.
ಅಂದಿನ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಲ್ ಕೇವಲ ಒಬ್ಬ ಸಾಧುಗಳ ಕನಸಿನ ಆಧಾರದ ಮೇರೆಗೆ ಶೋಧ ನಡೆಸುವುದು ಸರಿಯಲ್ಲ ಎಂದಿದ್ದರು. ಹೀಗಿರುವಾಗಲೇ ಅನೇಕ ಮಂದಿ ಅಲ್ಲಿ ನಿಧಿ ಇದೆ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ರಾಜ ವಂಶಸ್ಥರೂ ಉನ್ನಾವ್‌ಗೆ ದೌಡಾಯಿಸಿದ್ದರು.
ಗ್ರಾಮಸ್ಥರು ಕೂಡಾ ಅಲ್ಲಿ ನಿಧಿ ಇರುವುದು ನಿಜ ಎಂದು ವಾದಿಸಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ಈ ನಿಧಿ ಮೇಲೆ ಕೇವಲ ದೆಶದ ನಾಗರಿಕರ ಹಕ್ಕು ಇದೆ ಎಂದಿತ್ತು.
ಹೀಗಿರುವಾಗ ಅತ್ತ ಅಂದು ಆಡಳಿತ ಪಕ್ಷದಲ್ಲಿದ್ದ ಸಮಾಜವಾದದಿ ಪಕ್ಷ ನಿಧಿ ಮೇಲೆ ಕೇವಲ ರಾಜ್ಯ ಸರ್ಕಾರಕ್ಕಷ್ಟೇ ಹಕ್ಕಿದೆ ಎಂದಿದ್ದರು. ಈ ಚಿನ್ನ ಡೌಂಡಿಯಾ ಖೇಡಾ ವಂಶದ ಹದಿನೈದನೇ ದೊರೆ ರಾಜಾ ರಾವ್ ರಾಮ್ ಬಕ್ಶ್ ಸಿಂಗ್ ಅವಶೇಷದಡಿ ಹೂತಿಡಲಾಗಿದೆ ಎನ್ನಲಾಗಿತ್ತು.
ರಾಜಾ ರಾವ್ ರಾಮ್ ಬಕ್ಶ್ ಸಿಂಗ್ 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅವರ ಬೆವರಿಳಿಸಿದ್ದರು. ಬಳಿಕ ಅವರನ್ನು ಮರವೊಂದಕ್ಕೆ ನೇತು ಹಾಕಿ ಗಲ್ಲು ಶಿಕ್ಷೆಗೊಳಪಡಿಸಲಾಗಿತ್ತು. ಇಂದು ಸಾಧು ಶೋಭನ್ ಸರ್ಕಾರ್ ಕೊನೆಯುಸಿರೆಳೆದಿದ್ದಾರೆ.