ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ: ಶೃಂಗೇರಿ ಪುರೋಹಿತರಿಂದ ಪೂಜೆ, ಇಲ್ಲಿವೆ ಫೋಟೋಸ್!
ಪಿಎಂ ಮೋದಿ ನೂತನ ಸಂಸತ್ ಭವನದ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಗೆ ವಹಿಸಿದ್ದು, ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿಯ ತಂಡ ಈ ಪೂಜೆ ನೆರವೇರಿಸಿದ್ದಾರೆ. ಇಲ್ಲಿದೆ ನೋಡಿ, ಭೂಮಿ ಪೂಜೆ ಹಾಗೂ ಶಿಲಾನ್ಯಾಸದ ಫೋಟೋಸ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ(ಡಿಸೆಂಬರ್ 10) ನೂತನ ಸಂಸತ್ ಭವನಕ್ಕೆ ಶಿಲಾನ್ಯಾಸ ಪೂಜೆ ನೆರವೇರಿಸಿದರು.
ದೆಹಲಿಯ ಸಂಸತ್ತು ಭವನ ಆವರಣದಲ್ಲಿಯೇ ನೂತನ ಸಂಸತ್ತು ಭವನ ತಲೆಯೆತ್ತಲಿದೆ.
ಗುರುವಾರ ಮಧ್ಯಾಹ್ನ 12.40 ರಿಂದ 1.15ರ ತನಕ ನಡೆದ ಎಲ್ಲಾ ಕಾರ್ಯಕ್ರಮದ ಉಸ್ತುವಾರಿಯನ್ನು ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು, ನಾಯಕರು, ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ, ರಾಜ್ಯಸಭೆಯ ಉಪ ಸಭಾಪತಿ ಪರಿವಂಶ್, ಹಲವು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಈ ಯೋಜನೆಯ ಗುತ್ತಿಗೆ ವಹಿಸಿಕೊಂಡಿದ್ದು ನೂತನ ಸಂಸತ್ತು ಭವನವನ್ನು ನಿರ್ಮಿಸಿಕೊಡಲಿದೆ.
ನೂತನ ಸಂಸತ್ ಭವನ ನಿರ್ಮಾಣದ ಶಂಕು ಸ್ಥಾಪನೆಗೆ ಮೊದಲು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಪುರೋಹಿತರು ನಡೆಸಿಕೊಟ್ಟಿದ್ದಾರೆ.
ಇದಕ್ಕಾಗಿ ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿಯ ತಂಡ ದೆಹಲಿಗೆ ಇಂದು ಬೆಳಗ್ಗೆಯೇ ತಲುಪಿತ್ತು.
ಹೊಸ ಸಂಸತ್ ಭವನ ಏಕೆ ಬೇಕು?: ಈಗಿರುವ ಸಂಸತ್ ಭವನವನ್ನು 1921ರಲ್ಲಿ ನಿರ್ಮಿಸಲಾಗಿತ್ತು. 2021ರಲ್ಲಿ ಈಗಿನ ಸಂಸತ್ ಭವನಕ್ಕೆ 100 ವರ್ಷಗಳು ತುಂಬಲಿದೆ. ಸಂಸತ್ ಕಟ್ಟಡ ಹಳೆಯದಾಯಿತು ಎಂಬುದಷ್ಟೇ ಅಲ್ಲ. ಭವಿಷ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಸದರ ಸಂಖ್ಯೆ ಹೆಚ್ಚಾದಂತೆ ಅವರಿಗೆ ಸ್ಥಾಳವಕಾಶದ ಕೊರತೆ ಎದುರಾಗಲಿದೆ. 2026ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದರ ಕ್ಷೇತ್ರ ಮರುವಿಂಗಡಣೆಯಾದರೆ, ಇನ್ನಷ್ಟುಸಂಸದರ ಸಂಖ್ಯೆ ಹೆಚ್ಚಾಗಲಿದೆ. ಆಗ ಹಳೆಯ ಕಟ್ಟಡದಲ್ಲಿ ಜಾಗದ ಅಭಾವ ಉಂಟಾಗಲಿದೆ. ಜೊತೆಗೆ ಹೊಸ ಕಟ್ಟಡ ಆಧುನಿಕ ತಂತ್ರಜ್ಞಾನ, ಹೆಚ್ಚಿನ ಸುರಕ್ಷತಾ ವ್ಯವಸ್ಥೆ ಹಾಗೂ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ.
ವೆಚ್ಚ ಎಷ್ಟು?: ರಾಷ್ಟ್ರರಾಜಧಾನಿ ಪ್ರದೇಶ ಮರು ನಿರ್ಮಾಣ ಯೋಜನೆ (ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್) ಯೋಜನೆಯ ಅಡಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. 64,500 ಚದರ ಮೀಟರ್ ಪ್ರದೇಶದಲ್ಲಿ ತ್ರಿಭುಜಾಕೃತಿಯ ಸಂಸತ್ ಆವರಣ ನಿರ್ಮಾಣ ಆಗಲಿದೆ. ಈ ಯೋಜನೆಗೆ 971 ಕೋಟಿ ರು. ವೆಚ್ಚವಾಗುವ ನಿರೀಕ್ಷೆ ಇದೆ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್ 861.90 ಕೋಟಿ ರು.ಗೆ ಸಂಸತ್ ಭವನ ನಿರ್ಮಾಣ ಗುತ್ತಿಗೆ ಕಾಮಗಾರಿಯ ಬಿಡ್ ಅನ್ನು ಗೆದ್ದುಕೊಂಡಿದೆ. ಈ ಕಟ್ಟಡ ಹಳೆಯ ಕಟ್ಟಡದಷ್ಟೇ ಎತ್ತರ ಇರಲಿದ್ದು, ನೆಲ ಮಹಡಿ, ಮೊದಲ ಹಾಗೂ 2ನೇ ಅಂತಸ್ತನ್ನು ಹೊಂದಿರಲಿದೆ.
ಎಂದು ಪೂರ್ಣ?: ನೂತನ ಸಂಸತ್ ಭವನ ನಿರ್ಮಾಣ ಯೋಜನೆಯನ್ನು ಮುಂದಿನ 21 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ನೂತನ ಸಂಸತ್ ಭವನದಲ್ಲಿ ಕಲಾಪಗಳು ಆರಂಭವಾಗುವ ನಿರೀಕ್ಷೆ ಇದೆ. ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ 2000 ಮಂದಿ ನೇರವಾಗಿ ಹಾಗೂ 9000 ಮಂದಿ ಪರೋಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಸನ ಸಾಮರ್ಥ್ಯ ಎಷ್ಟು?: ಭವಿಷ್ಯದಲ್ಲಿ ಸಂಸತ್ ಸದಸ್ಯರ ಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕಟ್ಟಡದಲ್ಲಿ 1224 ಸಂಸದರು ಒಟ್ಟಿಗೆ ಕುಳಿತುಕೊಳ್ಳಬಹುದಾಗಿದೆ. ಲೋಕಸಭೆಯಲ್ಲಿ 888 ಹಾಗೂ ರಾಜ್ಯಸಭೆಯಲ್ಲಿ 384 ಆಸನ ವ್ಯವಸ್ಥೆ ಇರಲಿದೆ. ಸದ್ಯ ಲೋಕಸಭೆಯಲ್ಲಿ 543 ಹಾಗೂ ರಾಜ್ಯಸಭೆಯಲ್ಲಿ 245 ಸಂಸದರಿಗೆ ಆಸನ ವ್ಯವಸ್ಥೆ ಇದೆ.
ಈಗಿರುವ ಕಟ್ಟಡ ಏನಾಗಲಿದೆ?: ನೂತನ ಸಂಸತ್ ಭವನ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಹೊಸ ಸಂಸತ್ ಭವನ ಕಾರ್ಯಾರಂಭಿಸುವವರೆಗೂ ಸಂಸತ್ತಿನ ಚಟುವಟಿಕೆಗಳು ಹಳೆಯ ಕಟ್ಟಡದಲ್ಲೇ ನಡೆಯಲಿವೆ. ಬಳಿಕ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ದೇಶದ ಪುರಾತತ್ವ ಸಂಪತ್ತು ಎಂದು ಪರಿಗಣಿಸಲಾಗುತ್ತದೆ.
parliament