Photos: ವಿಶ್ವದ ಬೃಹತ್ ಪ್ರಜಾಪ್ರಭುತ್ವದ ಹೊಸ ದೇಗುಲಕ್ಕೆ ನರೇಂದ್ರ ಮೋದಿ ಭೇಟಿ!
ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ನೂತನ ಸಂಸತ್ ಭವನ ಅಗತ್ಯವನ್ನು ಪರಿಗಣಿಸಿ ನರೇಂದ್ರ ಮೋದಿ ಸರ್ಕಾರ ಇದರ ಕಾಮಗಾರಿ ಆರಂಭಿಸಿತ್ತು. ಬಹುತೇಕ ಪೂರ್ಣವಾಗಿರುವ ಸಂಸತ್ ಭವನಕ್ಕೆ ಗುರುವಾರ ಪ್ರಧಾನಿ ಮೋದಿ ಅಚ್ಚರಿಯ ಭೇಟಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಗುರುವಾರ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು.
ಅಂದಾಜು ಒಂದು ಗಂಟೆಗಳ ಕಾಲ ನೂತನ ಸಂಸತ್ ಭವನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಕಲಾಪ ನಡೆಯುವ ಪ್ರಧಾನ ಹಾಲ್‌ನಲ್ಲಿ ಆಗಿರುವ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.
ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಹಾಕಲಾಗಿರುವ ಮೇಜುಗಳು, ನಡೆದಾಡುವ ದಾರಿಯ ಅಂತರಗಳು ಇವೆಲ್ಲವನ್ನೂ ಪ್ರಧಾನಿ ಮೋದಿ ಗಮನಿಸಿದರು.
ನೂತನ ಸಂಸತ್ ಭವನಕ್ಕೆ ಅಚ್ಚರಿಯ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೊತೆಗೂ ಮಾತುಕತೆ ನಡೆಸಿದರು.
ಈಗಿರುವ ಸಂಸತ್ ಭವನವನ್ನು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಇಷ್ಟು ವರ್ಷಗಳ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಇದರಲ್ಲಿ ಮಾರ್ಪಾಡುಗಳನ್ನು ಮಾಡಲಾಗಿತ್ತು.
ಹಳೆ ಸಂಸತ್ ಭವನದಲ್ಲಿ ಮತ್ತೆ ಮಾರ್ಪಾಡುಗಳನ್ನು ಮಾಡಲು ಸಾಧ್ಯವಿಲ್ಲ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳೋದು ಸಾಧ್ಯವಿಲ್ಲ. ಇದಕ್ಕಾಗಿ ಹೊಸ ಸಂಸತ್ ಭವನ ಬರೋಬ್ಬರಿ 64500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಹೊಸ ಸಂಸತ್ ಭವನ ಹೊರನೋಟದಲ್ಲಿ ತ್ರಿಭುಜಾಕಾರದಲ್ಲಿ ಇರಲಿದೆ. ಹಳೆಯ ಭವನ ವೃತ್ತ ಆಕಾರದಲ್ಲಿತ್ತು. ಭೂಕಂಪ ವಿರೋಧಿ, Z ಹಾಗೂ Z ಪ್ಲಸ್ ಭದ್ರತೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ
ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಸತ್ ಭವನವನ್ನು ಮುಂದಿನ 150 ವರ್ಷಗಳನ್ನು ಗುರಿಯಲ್ಲಿರಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಇದರಲ್ಲಿ ಇರಲಿದೆ.
ಹೊಸ ಸಂಸತ್ ಭವನದಲ್ಲಿ ಲೋಕಸಭೆಯಲ್ಲಿ 888 ಸ್ಥಾನಗಳು ಹಾಗೂ ರಾಜ್ಯಸಭೆಯಲ್ಲಿ 384 ಸ್ಥಾನಗಳ ಸೀಟಿಂಗ್ ಇರುವಂತೆ ನಿರ್ಮಾಣ ಮಾಡಲಾಗುತ್ತಿದೆ. ಎರಡೂ ಕಲಾಪಗಳ ಜಂಟಿ ಅಧಿವೇಶನವಾದಲ್ಲಿ 1272 ಸಂಸದರು ಕುಳಿತುಕೊಳ್ಳಬಹುದಾದಂತ ವ್ಯವಸ್ಥೆ ಇದರಲ್ಲಿದೆ.
ಭಾರತದ ಭವ್ಯ ಪರಂಪರೆಯನ್ನು ಪರಿಚಯಿಸುವ ಸಂವಿಧಾನ ಹಾಲ್, ಗ್ರಂಥಾಲಯ, ಸಮಿತಿ ಕ್ಷೇತ್ರ ಹಾಗೂ ಭೋಜನಾಲಯಗಳು ಇರಲಿವೆ. ಬರೋಬ್ಬರಿ 1250 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ.