ವಾಕ್ಸಿನೇಷನ್ ಮೇಲ್ವಿಚಾರಣೆ ಮಾಡಿದ ಮೋದಿ; ಮೊದಲ ದಿನ 1.91 ಲಕ್ಷ ಮಂದಿಗೆ ಲಸಿಕೆ!
ವಿಶ್ವದ ಅತೀ ದೊಡ್ಡ ಕೊರೋನಾ ವಾಕ್ಸಿನೇಷನ್‌ಗೆ ಪ್ರಧಾನಿ ಮೋದಿ ಇಂದು(ಜ.16) ಚಾಲನೆ ನೀಡಿದ್ದಾರೆ. ದೇಶಾದ್ಯಂತ ಕೊರೋನಾ ಲಸಿಕೆ ನೀಡುವಿಕೆ ಸುಗಮವಾಗಿ ಸಾಗಿದೆ. ವಾಕ್ಸಿನೇಷನ್‌ಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ದೇಶದೆಲ್ಲಾ ಕೇಂದ್ರಗಳ ಲಸಿಕೆ ನೀಡುವಿಕೆಯನ್ನು ಲೈವ್ ಮೂಲಕ ಮೇಲ್ವಿಚಾರಣೆ ಮಾಡಿದರು. ಮೊದಲ ದಿನದ ವ್ಯಾಕ್ಸಿನೇಷ್ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.
ಭಾರತದಲ್ಲಿ ವಾಕ್ಸಿನೇಷನ್‌ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಲೈವ್ ಮೂಲಕ ದೇಶದ ಎಲ್ಲಾ ಲಸಿಕಾ ಕೇಂದ್ರಗಳ ಮೇಲ್ವಿಚಾರಣೆ ಮಾಡಿದರು.
ಪ್ರಧಾನಿ ಕಚೇರಿಯಲ್ಲಿ ಕುಳಿತ ಮೋದಿ, ನೈಜ ಸಮಯದ ಲೈವ್ ವಿಡಿಯೋ ಮೇಲ್ವಿಚಾರಣೆ ಮಾಡಿದರು. ಖುದ್ದು ಮೋದಿ ಪ್ರತಿ ಕೇಂದ್ರದ ಮಾಹಿತಿಯನ್ನು ಪಡೆದರು.
ಅತೀ ದೊಡ್ಡ ವಾಕ್ಸಿನೇಷನ್‌ಗೆ ಯಾವುದೇ ಸಮಸ್ಯೆ ಬರದ ರೀತಿ ನೋಡಿಕೊಳ್ಳಲಾಗಿತ್ತು. ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ, ಅಧಿಕಾರಿಗಳ ಜೊತೆ ನಿರಂತರ ಸಭೆ ಮೂಲಕ ಯಾವುದೇ ಲೋಪವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ ಕೊರೋನಾ ವಾಕ್ಸಿನೇಷನ್ ಮೊದಲ ದಿನ 1,91,181 ಮಂದಿ ಲಸಿಕೆ ಪಡೆದುಕೊಂಡರು.
ಮೊದಲ ದಿನ ದೇಶದ ಎಲ್ಲಾ ಕೇಂದ್ರಗಳಲ್ಲಿ ಒಟ್ಟು 16,755 ಮಂದಿ ಕೊರೋನಾ ಲಸಿಕೆ ನೀಡಲು ನೆರವಾದರು. ಇನ್ನು ಲಸಿಕೆ ಪಡೆದವರೆಲ್ಲ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ.
ಲಸಿಕೆ ಪಡೆದ ಎಲ್ಲರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಲಸಿಕೆ ಪಡೆದ ವ್ಯಕ್ತಿಗಳ ಮೇಲೆ 30 ನಿಮಿಷ ನಿಘಾ ಇಡಲಾಗಿತ್ತು. ಯಾರನ್ನೂ ಆಸ್ಪತ್ರೆ ದಾಖಲಿಸುವ ಪ್ರಮೇಯ ಬಂದಿಲ್ಲ.
ದೇಶದ 3006 ಕೇಂದ್ರಗಳಲ್ಲಿ ಕೊರೋನಾ ಲಸಿಕೆ ನೀಡಲಾಗಿತ್ತು. ಪ್ರತಿ ಕೇಂದ್ರದಿಂದ 100 ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಈ ಪ್ರಕಾರ ಕೇಂದ್ರ ಸರ್ಕಾರ ಯಶಸ್ವಿಯಾಗಿ ಮೊದಲ ದಿನ ಲಸಿಕೆ ನೀಡಿದೆ.