ಅವರು ಲಸಿಕೆ ಕೊಡ್ತೇನೆ ಅಂದ್ರು ನಮ್ಮಲ್ಲಿ ತಂದು ತಲುಪಿಸಕಾಗಲ್ಲ! ಯಾಕೆ ಅಂತೀರಾ?
ನವದೆಹಲಿ(ನ. 11) ಕೊರೋನಾ ಲಸಿಕೆ ಯಾವಾಗ? ಇದು ಎಲ್ಲರೂ ಕೇಳುತ್ತಿದ್ದ, ಕೇಳುತ್ತಿರುವ ಪ್ರಶ್ನೆ. ಈ ವರ್ಷದ ಅಂತ್ಯಕ್ಕೆ ಬರುತ್ತದೆಯಂತೆ.. ಮುಂದಿನ ವರ್ಷದ ಮಧ್ಯಭಾಗಕ್ಕೆ ಬರುತ್ತದೆಯಂತೆ.. ಹೀಗೆ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಇದೆಲ್ಲದರ ನಡುವೆ ಒಂದು ಆಘಾತಕಾರಿ ಸುದ್ದಿಯನ್ನು ನಾವು ಒಪ್ಪಿಕೊಳ್ಳಬೇಕಾದ ಸಂದರ್ಭ ಬಂದಿದೆ.
ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್ ಕೊರೊನಾ ವೈರಸ್‌ಗೆ ಲಸಿಕೆ ಸಿದ್ಧಪಡಿಸಿದ್ದು, ತಮ್ಮ ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಎಂದು ಹೇಳಿವೆ.
ಒಂದು ವೇಳೆ ಲಸಿಕೆ ಸಿದ್ಧವಾಗಿದ್ದರೂ ಭಾರತಕ್ಕೆ ದೊರೆಯುವುದು ಮಾತ್ರ ಕಷ್ಟ ಸಾಧ್ಯ ಎಂಬುದನ್ನು ವೆಲ್ಲೋರ್ ಸಿಎಂಸಿ ಪ್ರೋಫೆಸರ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಜ್ಞಾನಿ ಡಾ. ಗಗನ್ ದೀಪ್ ಕಂಗ್ ಇದರ ವೆಚ್ಚ ಮತ್ತು ಕಾಪಾಡುಕೊಳ್ಳುವ ವಿಧಾನ ಕಷ್ಟ ಸಾಧ್ಯ ಎಂದು ವಿವರಣೆ ನೀಡಿದ್ದಾರೆ.
ಭಾರತಕ್ಕೆ ಹೋಲಿಕೆ ಮಾಡಿದರೆ ಇದು ತುಂಬಾ ದುಬಾರಿಯಾಗಲಿದೆ ಎಂದು ವಿಜ್ಞಾನಿ ಹೇಳಿದ್ದಾರೆ.
ಆದರೆ ಲಸಿಕೆ ಸಿಕ್ಕಿದರೂ ಇದನ್ನು ಬಹುಸಂಖ್ಯಾತ ಜನರಿಗೆ ನೀಡುವುದೇ ಕಷ್ಟಸಾಧ್ಯವಾಗಲಿದೆ. ಇದಕ್ಕೆ ಕಾರಣ ಲಸಿಕೆಯ ವಿಶೇಷ ಗುಣಲಕ್ಷಣಗಳು.
ಡೋಸ್ ಲಸಿಕೆಗೆ 37 ಡಾಲರ್ ಅಂದರೆ 2,746 ರೂ. ನೀಡಬೇಕಾಗುತ್ತದೆ. BNT162b2 ಕರೆಸಿಕೊಳ್ಳುವ ಲಸಿಕೆಯ ಫೈನಲ್ ದರ ಇನ್ನು ಫಿಕ್ಸ್ ಆಗಿಲ್ಲ.
ಒಂದು ವೇಳೆ ಅಮೆರಿಕದಿಂದ ಇದನ್ನು ತರಿಸಿಕೊಂಡರೂ ದೇಶದ ಎಲ್ಲ ಭಾಗಕ್ಕೆ ಕಳಿಸಿಕೊಡುವುದು ಒಂದು ದೊಡ್ಡ ಸವಾಲು.
ಸೂಪರ್ ಕೋಲ್ಡ್ ಸ್ಟೋರೇಜ್ ಅಗತ್ಯ ಇದ್ದು ದೇಶದ ಎಲ್ಲ ಆಸ್ಪತ್ರೆಗಳಲಲ್ಲಿ ಲಭ್ಯವಿಲ್ಲ.
ಈ ಲಸಿಕೆಯನ್ನು, ವಿಶೇಷ ವಿಮಾನಗಳಲ್ಲಿ ತಂದು, ಡೀಪ್-ಫ್ರೀಜ್ ಏರ್‌ಪೋರ್ಟ್ ಗೋದಾಮುಗಳಲ್ಲಿ ಇಡಬೇಕಾಗಿದೆ. ಅಲ್ಲಿಂದ ರೆಫ್ರಿಜರೇಟರ್ ಇರುವ ವಾಹನಗಳಲ್ಲಿ ಸಾಗಿಸಬೇಕು.
ಒಮ್ಮೆ ಲಸಿಕೆ ಕೇಂದ್ರಕ್ಕೆ ತಲುಪಿದ ನಂತರ ಈ ಲಸಿಕೆಗಳನ್ನು ಸಾಮಾನ್ಯ ತಾಪಮಾನಕ್ಕೆ ತಂದು ಐದು ದಿನದ ಒಳಗೆ ಖಾಲಿ ಮಾಡಬೇಕು.
ಭಾರತದಂಥ ದೇಶದಲ್ಲಿ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಣೆ ಮಾಡಿಟ್ಟುಕೊಳ್ಳುವುದು ಕಷ್ಟ ಸಾಧ್ಯ.
ಒಂದೊಮ್ಮೆ ಲಸಿಕೆಯನ್ನು ಆಯಾ ದೇಶಗಳು ತಯಾರಿಕೆಗೆ ಮುಂದಾದರೂ, ಅದಕ್ಕೆ ಬೇಕಾದ ತಯಾರಿಕಾ ಘಟಕವನ್ನು ಹೊಸದಾಗಿ ನಿರ್ಮಿಸಬೇಕಿದೆ. ಉತ್ಪಾದನಾ ಘಟಕ, ಗೋದಾಮು ಮತ್ತು ಸರಬರಾಜು ಜಾಲವನ್ನು ಹೊಸದಾಗಿ ನಿರ್ಮಿಸಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ.
ಅಮೆರಿಕ ಔಷಧಿ ಸಂಸ್ಥೆ ಹೇಳಿದ್ದರೂ ಅಮೆರಿಕದಲ್ಲಿ ಈಗ ಅಧಿಕಾರ ಬದಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಯಾವ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಕೇಂದ್ರ ಸರ್ಕಾರದ ಮುಂದೆ ಪ್ರಶ್ನೆ ಇಟ್ಟಿದ್ದು ಲಸಿಕೆಯಲ್ಲಿ ಸಕಾರಾತ್ಮಕ ಹೆಜ್ಜೆ ಇದ್ದರೆ ಭಾರತ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.