ಇನ್ಮುಂದೆ ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗೆ ಕಣ್ಣಿಡಲಿದೆ ಐಟಿ ಇಲಾಖೆ!
ಆದಾಯ ತೆರಿಗೆ ಇಲಾಖೆಗೆ ಹೊಸ ಅಧಿಕಾರ: ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆದಾರರ ಡಿಜಿಟಲ್ ಮಾಹಿತಿಯನ್ನು ಪರಿಶೀಲಿಸಲು ಆದಾಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ವ್ಯಾಪಾರ ಖಾತೆಗಳು ಸೇರಿದಂತೆ ವೈಯಕ್ತಿಕ ಮಾಹಿತಿಗೆ ಪ್ರವೇಶವು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆ ಕಾನೂನುಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಮಸೂದೆಯಲ್ಲಿನ ಒಂದು ನಿಯಮದ ಪ್ರಕಾರ, ಆದಾಯ ತೆರಿಗೆ ವಿಚಾರಣೆಯ ಸಮಯದಲ್ಲಿ ಇಮೇಲ್‌ಗಳು, ಸಾಮಾಜಿಕ ಜಾಲತಾಣ ಪುಟಗಳು ಮತ್ತು ವ್ಯಾಪಾರ ಖಾತೆಗಳು ಸೇರಿದಂತೆ ತೆರಿಗೆದಾರರ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಬಹುದು ಎಂದಿದೆ. ಇದರ ಮೂಲಕ ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ವೈಯಕ್ತಿಕ ಮಾಹಿತಿಯನ್ನು ವೀಕ್ಷಿಸಲು ವ್ಯಾಪಕ ಅಧಿಕಾರವನ್ನು ನೀಡಲಾಗುತ್ತದೆ, ಇದರಿಂದಾಗಿ ಹೊಸ ಮಸೂದೆ ಮತ್ತೆ ಸುದ್ದಿಯಲ್ಲಿದೆ.
ಹೊಸ ಮಸೂದೆಯಲ್ಲಿ ಸೆಕ್ಷನ್ 247 ಏನು ಹೇಳುತ್ತದೆ?:
ಈ ನಿಯಮವು ಹುಟ್ಟುಹಾಕಿರುವ ಪ್ರಮುಖ ಕಾಳಜಿಯೆಂದರೆ "ವರ್ಚುವಲ್ ಡಿಜಿಟಲ್ ಸ್ಪೇಸ್‌ಗಳು". ಹೊಸ ಮಸೂದೆಯ ಅಡಿಯಲ್ಲಿ, ತೆರಿಗೆ ಅಧಿಕಾರಿಗಳು ಡಿಜಿಟಲ್ ಆಸ್ತಿಗಳನ್ನು ಪ್ರವೇಶಿಸಲು ಅನುಮತಿ ಕೇಳಬಹುದು ಮತ್ತು ತೆರಿಗೆದಾರರು ಅನುಮತಿಸಲು ನಿರಾಕರಿಸಿದರೆ, ಅಧಿಕಾರಿಗಳು ಪಾಸ್‌ವರ್ಡ್‌ಗಳಿಲ್ಲದೆ ಲಾಗಿನ್ ಆಗಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಸಿ, ಅವರು ಫೈಲ್‌ಗಳನ್ನು ವೀಕ್ಷಿಸಬಹುದು ಎಂದು ಮಾಹಿತಿ ತಿಳಿಸುತ್ತದೆ.
ಡಿಜಿಟಲ್ ದಾಖಲೆಗಳು:
ಪ್ರಸ್ತುತ, ಆದಾಯ ತೆರಿಗೆ ಅಧಿಕಾರಿಗಳಿಗೆ ಲ್ಯಾಪ್‌ಟಾಪ್, ಹಾರ್ಡ್ ಡ್ರೈವ್‌ಗಳು ಮತ್ತು ಇಮೇಲ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗಿದೆ. ಆದರೆ, ಪ್ರಸ್ತುತ ಆದಾಯ ತೆರಿಗೆ ಕಾಯಿದೆಯಲ್ಲಿ ಡಿಜಿಟಲ್ ದಾಖಲೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಇದರಿಂದಾಗಿಯೇ ಇಂತಹ ಕ್ರಮಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ಆದಾಯ ತೆರಿಗೆ ಇಲಾಖೆಗೆ ಹಿನ್ನಡೆಯಾಗುತ್ತದೆ.
ಹೊಸ ಆದಾಯ ತೆರಿಗೆ ಮಸೂದೆಯ ಸೆಕ್ಷನ್ 247 ರ ಅಡಿಯಲ್ಲಿ, ತೆರಿಗೆ ವಂಚನೆ ಅಥವಾ ತೆರಿಗೆ ಪಾವತಿಸದ ಬಹಿರಂಗಪಡಿಸದ ಆಸ್ತಿಗಳಿವೆ ಎಂದು ಅನುಮಾನವಿದ್ದರೆ, ವ್ಯಕ್ತಿಗಳ ಇಮೇಲ್‌ಗಳು, ಸಾಮಾಜಿಕ ಮಾಧ್ಯಮ, ಬ್ಯಾಂಕ್ ವಿವರಗಳು ಮತ್ತು ಹೂಡಿಕೆ ಖಾತೆಗಳನ್ನು ಪ್ರವೇಶಿಸಲು ಆದಾಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಲಾಗುತ್ತದೆ.
ಆದಾಯ ತೆರಿಗೆ ಇಲಾಖೆಗೆ ಅಧಿಕಾರ:
ವಿಭಾಗ (i) ನಲ್ಲಿ ನೀಡಲಾದ ಅಧಿಕಾರಗಳನ್ನು ಬಳಸುವುದಕ್ಕಾಗಿ, ಯಾವುದೇ ಬಾಗಿಲು, ಪೆಟ್ಟಿಗೆ, ಲಾಕರ್, ಸುರಕ್ಷತಾ ಠೇವಣಿ, ಕಪಾಟು ಅಥವಾ ಇತರ ಕಂಟೇನರ್‌ಗಳ ಬೀಗವನ್ನು ಮುರಿದು ತೆರೆಯಬಹುದು. ಅಂತಹ ಪ್ರವೇಶಿಸಲಾಗದ ಯಾವುದೇ ಕಟ್ಟಡವನ್ನು ಪ್ರವೇಶಿಸಿ ಹುಡುಕಬಹುದು. ಯಾವುದೇ ಕಂಪ್ಯೂಟರ್ ಸಿಸ್ಟಮ್ ಅಥವಾ ವರ್ಚುವಲ್ ಡಿಜಿಟಲ್ ಸ್ಪೇಸ್ ಅನ್ನು ಪ್ರವೇಶಿಸಲು ಪಾಸ್‌ವರ್ಡ್ ಲಭ್ಯವಿಲ್ಲದಿದ್ದರೆ, ಅದನ್ನು ಇಲ್ಲದೆಯೇ ಲಾಗಿನ್ ಮಾಡಬಹುದು ಎಂದು ಮಸೂದೆಯ ಉಪವಿಭಾಗದಲ್ಲಿ ಹೇಳಲಾಗಿದೆ ಎಂದು ವರದಿಗಳು ತಿಳಿಸಿವೆ. ಓದಿರಿ.
ಸರಳವಾಗಿ ಹೇಳುವುದಾದರೆ, ಆದಾಯ ತೆರಿಗೆ ಅಧಿಕಾರಿಗಳು ತೆರಿಗೆದಾರರ "ವರ್ಚುವಲ್ ಡಿಜಿಟಲ್ ಸ್ಪೇಸ್" ಅನ್ನು ಪ್ರವೇಶಿಸಲು ಹೊಸ ನಿಯಮವು ಅನುಮತಿ ನೀಡುತ್ತದೆ. ಕ್ಲೌಡ್ ಸ್ಟೋರೇಜ್, ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವ್ಯಾಪಾರ ಪ್ಲಾಟ್‌ಫಾರ್ಮ್‌ಗಳಂತಹ ಇಂಟರ್ನೆಟ್ ಮೂಲಕ ಸಂವಹನ ನಡೆಸುವ ಯಾವುದೇ ಪ್ಲಾಟ್‌ಫಾರ್ಮ್ ಇದರಲ್ಲಿ ಸೇರಿವೆ.
ಹೊಸ ಆದಾಯ ತೆರಿಗೆ ಮಸೂದೆಯ ಬಗ್ಗೆ ತಜ್ಞರು ಏನು ಹೇಳುತ್ತಾರೆ?:
ಹೊಸ ನಿಯಮದ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿಯ ವಿಶ್ವಾಸ್ ಪಂಜಿರ್ ರಾಯಿಟರ್ಸ್ಗೆ ನೀಡಿದ ಸಂದರ್ಶನದಲ್ಲಿ, "ಪ್ರಸ್ತುತ ಆದಾಯ ತೆರಿಗೆ ಕಾನೂನಿನಿಂದ ಹೊಸ ಮಸೂದೆಯು ಗಮನಾರ್ಹ ಬದಲಾವಣೆಯನ್ನು ಹೊಂದಿದೆ" ಎಂದು ಹೇಳಿದ್ದಾರೆ. ಸರಿಯಾದ ರಕ್ಷಣೆಗಳಿಲ್ಲದೆ, ಆದಾಯ ತೆರಿಗೆ ಅಧಿಕಾರಿಗಳು ಹೊಸ ಅಧಿಕಾರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಖೈತಾನ್ & ಕಂನ ಸಂಜಯ್ ಸಾಂಘ್ವಿ ಮಾತನಾಡಿ, "ಆದಾಯ ತೆರಿಗೆ ಅಧಿಕಾರಿಗಳು ಈ ಹಿಂದೆ ಡಿಜಿಟಲ್ ಸಾಧನಗಳನ್ನು ಪ್ರವೇಶಿಸಲು ಕೇಳುತ್ತಿದ್ದರು. ಆದರೆ ಕಾನೂನು ಅದನ್ನು ಸ್ಪಷ್ಟವಾಗಿ ಅನುಮತಿಸಲಿಲ್ಲ. ಹೊಸ ಮಸೂದೆಯು ಅದಕ್ಕೆ ಕಾನೂನು ಪರಿಹಾರವನ್ನು ಒದಗಿಸಿದೆ" ಎಂದು ಹೇಳಿದ್ದಾರೆ.