ಭಾರತದಲ್ಲಿ ಮೊದಲ ಬಾರಿಗೆ ಇಂದಿನಿಂದ ಜಿ20 ಶೃಂಗ: ಐತಿಹಾಸಿಕ ಶೃಂಗಸಭೆಯ ನಿರೀಕ್ಷೆಗಳು ಹೀಗಿದೆ..
ಇದೇ ಮೊದಲ ಬಾರಿಗೆ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಕಳೆದೊಂದು ವರ್ಷದಿಂದ ಭಾರತದಲ್ಲಿ ನಡೆದ 200ಕ್ಕೂ ಹೆಚ್ಚು ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ಶೃಂಗ ಸಭೆ ಆಯೋಜಿಸಲಾಗಿದೆ.
ಬಡ ದೇಶಗಳ ಸಂಕಷ್ಟಗಳು, ಉಕ್ರೇನ್ ಯುದ್ಧದ ಪರಿಣಾಮಗಳು, ಆರ್ಥಿಕ ಹಿಂಜರಿತದ ಸನ್ನಿವೇಶ ಮತ್ತು ಇತರ ಜಾಗತಿಕ ಸವಾಲುಗಳ ನಡುವೆಯೇ ದಿಲ್ಲಿಯಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ಜಿ20 ಶೃಂಗಸಭೆಗೆ ಶನಿವಾರ ಚಾಲನೆ ಸಿಗ್ತಿದೆ. ಇದೇ ಮೊದಲ ಬಾರಿಗೆ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಕಳೆದೊಂದು ವರ್ಷದಿಂದ ಭಾರತದಲ್ಲಿ ನಡೆದ 200ಕ್ಕೂ ಹೆಚ್ಚು ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ಶೃಂಗ ಸಭೆ ಆಯೋಜಿಸಲಾಗಿದೆ.
ಛಿದ್ರಗೊಂಡ ಭೌಗೋಳಿಕ ರಾಜಕೀಯ ಪರಿಸರದ ನಡುವೆ ಈ ಸಭೆ ಆಯೋಜಿತವಾಗಿದ್ದು, ಜಾಗತಿಕ ಅಭಿವೃದ್ಧಿ ಹಾಗೂ ಜಾಗತಿಕ ಶಾಂತಿಗೆ ನಾಂದಿ ಹಾಡುವ ಯಾವ ನಿರ್ಣಯಗಳನ್ನು ಭಾರತದ ಅಧ್ಯಕ್ಷತೆಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಸಭಾ ನಿರ್ಣಯಗಳು ಭಾರತದ ಬಲವನ್ನು ವಿಶ್ವದಲ್ಲಿ ಸಾಬೀತುಪಡಿಸುವ ಲಕ್ಷಣಗಳಿವೆ.
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜಿ 20 ಗುಂಪಿನ ಇತರ ನಾಯಕರು ದಿಲ್ಲಿಗೆ ಈಗಾಗಲೇ ದೌಡಾಯಿಸಿದ್ದು, ರಾಜಧಾನಿ 2 ದಿನಗಳ ಕಾಲ ಎಡೆಬಿಡದ ಚಟುವಟಿಕೆಗಳಿಂದ ರಂಗೇರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶೃಂಗಕ್ಕೆ ಬರುವುದಿಲ್ಲ. ಬದಲಾಗಿ ತಮ್ಮ ಪ್ರತಿನಿಧಿಗಳನ್ನು ಕಳಿಸಲಿದ್ದಾರೆ.
ಜಂಟಿ ಘೋಷಣೆ ಇರುತ್ತಾ?:
ಜಿ20 ಶೃಂಗಕ್ಕೆ ಉಕ್ರೇನ್-ರಷ್ಯಾ ಯುದ್ಧ ಪ್ರಮುಖ ಸಮಸ್ಯೆಯಾಗಿ ಗೋಚರವಾಗುವ ಸಾಧ್ಯತೆ ಇದ್ದು, ಯುದ್ಧದ ವಿರುದ್ಧ ಒಮ್ಮತದ ಘೋಷಣೆ ಮೂಡುತ್ತಾ ಎಂಬುದು ಪ್ರಶ್ನೆಯಾಗಿದೆ. ಕಳೆದ ಸಭೆಯ ವೇಳೆಯೂ ಒಮ್ಮತ ಹೇಳಿಕೆ ಈ ಯುದ್ಧದ ವಿಷಯದಲ್ಲಿ ಹೊರಹೊಮ್ಮಿರಲಿಲ್ಲ. ಈ ಶೃಂಗದಲ್ಲಿ ಈವರೆಗೂ ರಾಷ್ಟ್ರಗಳ ಮಧ್ಯೆ ಯುದ್ಧದ ವಿರುದ್ಧ ಒಮ್ಮತ ಮೂಡಿಲ್ಲ. ಒಮ್ಮತ ಮೂಡಿಸಲು ಹಿಂಬಾಗಿಲ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಜಿ20ಗೆ ಆಫ್ರಿಕಾ ಒಕ್ಕೂಟ?:
ವಿಶ್ವಸಂಸ್ಥೆಯ ನಂತರ ಬಹುಶಃ ಅತ್ಯಂತ ಪ್ರಭಾವಶಾಲಿ ಬಹುಪಕ್ಷೀಯ ವೇದಿಕೆಯಾಗಿ ಹೊರಹೊಮ್ಮಿರುವ ಜಿ20ಯಲ್ಲಿ ಆಫ್ರಿಕಾ ಒಕ್ಕೂಟವನ್ನು ಸೇರಿಸಿಕೊಳ್ಳುವ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಆಫ್ರಿಕಾ ಒಕ್ಕೂಟ ಸೇರಿಸಲು ಭಾರತ ಈಗಾಗಲೇ ಪ್ರಸ್ತಾವನೆ ಇರಿಸಿದ್ದು, ಬಲವಾದ ವಾದ ಮಂಡಿಸುತ್ತಿದೆ. ಆಫ್ರಿಕಾ ಒಕ್ಕೂಟವು 55 ಆಫ್ರಿಕಾ ದೇಶಗಳನ್ನು ಪ್ರತಿನಿಧಿಸುವ ಯುರೋಪ್ ಒಕ್ಕೂಟದ ಮಾದರಿಯ ಸಂಘಟನೆಯಾಗಿದೆ.
ಇತರ ಅಜೆಂಡಾಗಳು:
ಭಯೋತ್ಪಾದನೆ ನಿಗ್ರಹದ ಬಗ್ಗೆ ಮಹತ್ವದ ಚರ್ಚೆಗಳು ಏರ್ಪಡುವ ಸಾಧ್ಯತೆ ಇದೆ. ಆರ್ಥಿಕ ಹಿಂಜರಿತ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಹಣಕಾಸು, ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನದಂತಹ ವಿಷಯಗಳ ಕುರಿತು ಭಾರತದ ಪ್ರಸ್ತಾಪಗಳಿಗೆ ಧನಾತ್ಮಕ ಫಲಿತಾಂಶಗಳ ನಿರೀಕ್ಷೆಯಿದೆ.
ಜಿ20 ಗುಂಪು ಅರ್ಜೆಂಟೀನಾ, ಆಸ್ಪ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದ. ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವನ್ನು ಒಳಗೊಂಡಿದೆ. ಈ ದೇಶಗಳು ವಿಶ್ವದ ಜಿಡಿಪಿಯ ಶೇ.85 ಹಾಗೂ ವಿಶ್ವ ವ್ಯಾಪಾರದ ಶೇ.75 ರಷ್ಟು ಪಾಲು ಹೊಂದಿವೆ.
ಸರ್ವರ ಅಭಿವೃದ್ಧಿಗೆ ಹಾದಿ
ಭಾರತವು ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದೆ. ಇದು ನಮಗೆ ಸಂತಸ ತರುತ್ತಿದೆ. ಶೃಂಗಸಭೆಯು ಮಾನವ ಕೇಂದ್ರಿತ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಹೊಸ ಹಾದಿ ರೂಪಿಸಲಿದೆ. ಈಗ ಭಾರತಕ್ಕೆ ಬಂದಿರುವ ಅತಿಥಿಗಳು ನಮ್ಮ ಆತಿಥ್ಯವನ್ನು ಆನಂದಿಸುವ ವಿಶ್ವಾಸವಿದೆ.
- ನರೇಂದ್ರ ಮೋದಿ ಪ್ರಧಾನಿ
ನಿರೀಕ್ಷೆಗಳೇನು?
1. ರಷ್ಯಾ- ಉಕ್ರೇನ್ ಯುದ್ಧದ ಬಗ್ಗೆ ಒಮ್ಮತ ನಿರ್ಣಯ
2. ಜಿ-20 ಕೂಟಕ್ಕೆ ಆಫ್ರಿಕಾ ಕೂಟ ಸೇರ್ಪಡೆ ತೀರ್ಮಾನ
3. ಭಯೋತ್ಪಾದನೆ ನಿಗ್ರಹ ಕುರಿತು ಮಹತ್ವದ ಚರ್ಚೆ
4. ಆರ್ಥಿಕ ಹಿಂಜರಿತ, ವಿತ್ತ ವಿಷಯ ಸಮಾಲೋಚನೆ
5. ಹವಾಮಾನ ಬದಲಾವಣೆ, ಶುದ್ಧ ಇಂಧನ ಬಗ್ಗೆ ಚರ್ಚೆ