ದೇಶಾದ್ಯಂತ ರೈತರ ಚಕ್ಕಾ ಜಾಮ್; ಫೆ.6ರ ಪ್ರತಿಭಟನೆ ಸಮಯ, ಸ್ಥಳ, ಸಂಪೂರ್ಣ ಮಾಹಿತಿ!
ಕಳೆದೆರಡು ತಿಂಗಳಿನಿಂದ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಟ್ರಾಕ್ಟರ್ ರ್ಯಾಲಿ ಬಳಿಕ ನಡೆಯುತ್ತಿರುವ ಮತ್ತೊಂದು ಪ್ರತಿಭಟನೆ ಇದಾಗಿದ್ದು, ಹೆಚ್ಚಿನ ಬಂದೋಬಸ್ತ್ ನಡೆಸಲಾಗಿದೆ. ಫೆಬ್ರವರಿ 6 ರಂದು ರೈತ ಸಂಘಟನೆಗಳು ಕರೆ ನೀಡಿದ ಚಕ್ಕಾ ಜಾಮ್ ಪ್ರತಿಭಟನೆ ಸಮಯ, ಸ್ಥಳ, ಸ್ವರೂಪ ಕುರಿತ ಮಾಹಿತಿ ಇಲ್ಲಿದೆ.
ಫೆಬ್ರವರಿ 6 ರಂದು ರೈತ ಸಂಘಟನೆಗಳು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ 40 ರೈತ ಸಂಘಟನೆಗಳು ರಸ್ತೆ ತಡೆ(ಚಕ್ಕಾ ಜಾಮ್)ಕರೆ ನೀಡಿದೆ. ಪ್ರತಿಭಟನೆಯಲ್ಲಿ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ.
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ವರೆದೆ ರಸ್ತೆ ತಡೆ ಪ್ರತಿಬಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿದೆ. ಆದರೆ ದೆಹಲಿ ಹೊರತು ಪಡಿಸಿ ದೇಶಾದ್ಯಂತ ಈ ಪ್ರತಿಭಟನೆ ನಡೆಯಲಿದೆ.
ಚಕ್ಕಾ ಜಾಮ್ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಲಿದೆ. ಯಾವುದೇ ಅಹಿತಕರ ಘಟನೆಗೆ ಅವಾಕಾಶವಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕೈಟ್ ಹೇಳಿದ್ದಾರೆ.
3 ಗಂಟೆಗೆ ಸತತ 1 ನಿಮಿಷ ಟ್ರಾಕ್ಟರ್ ಹಾರ್ನ್ ಹಾಕೋ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಳ್ಳಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.
ಕೆಲವರು ಚಕ್ಕಾ ಜಾಮ್ ಪ್ರತಿಭಟನೆಗೆ ಹಿಂಸಾ ರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಚಕ್ಕಾ ಜಾಮ್ ಪ್ರತಿಭಟನೆ ಇರುವುದಿಲ್ಲ ಎಂದು ರಾಕೇಶ್ ಟಿಕೈಟ್ ಹೇಳಿದ್ದಾರೆ.
ನವೆಂಬರ್ 26ರಿಂದ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರದ ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಪ್ರತಿಭಟನಾ ನಿರತ ರೈತರ ಜೊತೆ ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ ಯಾವುದು ಫಲಪ್ರದವಾಗಿಲ್ಲ. ಕೃಷಿ ಕಾಯ್ದೆಯನ್ನು ಒಂದೂವರೆ ವರ್ಷ ತಡೆ ನೀಡಲು ಸಿದ್ಧ ಎಂದು ಕೇಂದ್ರ ಹೇಳಿದೆ.