ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮಿತಿ ಮೀರಿದ ಕೊರೋನಾ; ಆರೋಗ್ಯ ಇಲಾಖೆ ವಾರ್ನಿಂಗ್!
ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಕೊರೋನಾ ವರದಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿ 8 ರಾಜ್ಯಗಳಿಕೆ ಮಹತ್ವದ ಸೂಚನೆ ನೀಡಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ 8 ರಾಜ್ಯಗಳಿಂದ ದೇಶದಲ್ಲಿ ಶೇಕಡಾ 84.73 ರಷ್ಟು ಕೊರೋನಾ ಪ್ರಕರಣಗಳು ಆಗಿವೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.
ಮಹಾರಾಷ್ಟ್ರ, ಚತ್ತೀಸಘಡ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಂಜಾಬ್ ಹಾಗೂ ಮಧ್ಯ ಪ್ರದೇಶದಲ್ಲಿ ಕೊರೋನಾ ನಿಯಂತ್ರಣ ಮೀರಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ಹೇಳಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 53,480 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ 12,149,335.
ಕಳೆದೆರಡು ದಿನದಲ್ಲಿ 354 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾಗೆ ಸಾವನ್ನಪ್ಪಿದ್ದವರ ಸಂಖ್ಯೆ 1,62,468ಕ್ಕೇ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಮಂಗಳವಾರ(ಮಾ.30): 2,975 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಇನ್ನು 21 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನ 27,918 ಕೊರೋನಾ ಪ್ರಕರಣ ದಾಖಲಾಗಿದೆ. 139 ಮಂದಿ ಬಲಿಯಾಗಿದ್ದಾರೆ. ಪ್ರತಿ ರಾಜ್ಯದ ವರದಿ ತರಿಸಿಕೊಂಡಿರುವ ಕೇಂದ್ರ ಇದೀಗ ಕಟ್ಟು ನಿಟ್ಟಿನ ಕ್ರಮಕ್ಕೆ ಆಗ್ರಹಿಸಿದೆ
ಕೊರೋನಾ ಹರಡುತ್ತಿರುವ ಪ್ರದೇಶಗಳ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸೂಚಿಸಿದೆ. ಕರ್ನಾಟಕದಲ್ಲಿ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಆದರೆ ಕರ್ನಾಟಕದಲ್ಲಿ ಸಭೆ, ಸಮಾರಂಭ, ಮಾರುಕಟ್ಟೆ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟು ನಿಟ್ಟಾಗಿ ಕೊರೋನಾ ಮಾರ್ಗಸೂಚಿ ಪಾಲಿಸಲು ಆದೇಶ ಹೊರಡಿಸಲಾಗಿದೆ
ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಕುರಿತು ಮುಂಜಾಗ್ರತೆ ವಹಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಕರಣಗಳ ಸಂಖ್ಯೆ ಇಳಿಯುತ್ತಿಲ್ಲ.