ಹೆಚ್ಚಿದ ಯೂರಿಕ್ ಆ್ಯಸಿಡ್ ಕಡಿಮೆ ಮಾಡುವುದು ಹೇಗೆ?
ಲೈಫ್ ಸ್ಟೈಲ್ ಬದಲಾದಂತೆ ಆರೋಗ್ಯ ಸಂಬಂಧಿಸಿದ ಅನೇಕ ರೋಗಗಳಿಂದ ಮನುಷ್ಯ ಕಂಗೆಟ್ಟಿದ್ದಾನೆ. ಹೆಚ್ಚಿನ ಜನ ಮಧುಮೇಹ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ, ಯೂರಿಕ್ ಆಸಿಡ್ ಪ್ರಕರಣಗಳು ಸಹ ಹೆಚ್ಚಾಗಿ ಕಂಡುಬರುತ್ತಿದೆ. ನಿಮ್ಮ ಯೂರಿಕ್ ಆಸಿಡ್ (uric acid) ಮಟ್ಟವೂ ಹೆಚ್ಚಾಗಿದ್ದರೆ, ಈ ಸಲಹೆ ಅನುಸರಿಸುವ ಮೂಲಕ ಸಮಸ್ಯೆಗಳನ್ನು ನಿವಾರಿಸಿ.
ತಪ್ಪಾದ ಲೈಫ್ ಸ್ಟೈಲ್ ಮತ್ತು ಕೆಟ್ಟ ಆಹಾರದಿಂದ, ಇತ್ತೀಚಿಗೆ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪ್ಯೂರಿನ್ಸ್ ಎಂಬ ಧಾತುವು ವಿಘಟನೆಗೊಂಡು ದೇಹದಲ್ಲಿ ರೂಪುಗೊಂಡಾಗ ಯೂರಿಕ್ ಆಸಿಡ್ ರೂಪುಗೊಳ್ಳುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾದಾಗ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ.
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ, ವೈದ್ಯರು ನಿಮಗೆ ಕೆಲವು ಔಷಧಿಗಳನ್ನು ನೀಡುತ್ತಾರೆ, ಆದರೆ ಇದರೊಂದಿಗೆ, ನೀವು ನಿಮ್ಮ ಜೀವನಶೈಲಿ (Lifestyle) ಮತ್ತು ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ, ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು.
ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಏನು ಮಾಡಬೇಕು?
ಸಕ್ಕರೆ ಸೇವನೆ ತಪ್ಪಿಸಿ
ಯೂರಿಕ್ ಆಸಿಡ್ ಸಾಮಾನ್ಯವಾಗಿ ಪ್ರೋಟೀನ್ (protein) ಸಮೃದ್ಧವಾಗಿರುವ ಆಹಾರಗಳೊಂದಿಗೆ ಸಂಬಂಧ ಹೊಂದಿದೆ, ಆದರೆ ಇತ್ತೀಚಿನ ಅಧ್ಯಯನಗಳು ಸಕ್ಕರೆಯಿಂದಾಗಿಯೂ ಯೂರಿಕ್ ಆಸಿಡ್ ಹೆಚ್ಚಾಗುತ್ತೆ ಎಂದು ತಿಳಿಸಿದೆ. ನಿಮ್ಮ ಆಹಾರದಲ್ಲಿ ಹೆಚ್ಚಿನ ಸಕ್ಕರೆ, ಕಾರ್ನ್ ಸಿರಪ್ ಮತ್ತು ಇತರ ವಸ್ತುಗಳನ್ನು ಬಳಸೋದ್ರಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತೆ. ಸಂಸ್ಕರಿಸಿದ ಆಹಾರಗಳು ಸಕ್ಕರೆ ಫ್ರಕ್ಟೋಸ್ ಅನ್ನು ಹೊಂದಿದ್ದು, ಇದು ಒಂದು ರೀತಿಯ ಸಾಮಾನ್ಯ ಸಕ್ಕ. ಈ ಸಕ್ಕರೆಗಳು ಯೂರಿಕ್ ಆಸಿಡ್ ಗೆ ಕಾರಣವಾಗುತ್ತೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಲ್ಲದೆ, ಶುಗರ್ ಡ್ರಿಂಕ್ಸ್, ಸೋಡಾಗಳು ಮತ್ತು ಹಣ್ಣಿನ ಜ್ಯೂಸ್ ಸಹ ಸಕ್ಕರೆಯನ್ನು ಹೊಂದಿರುತ್ತವೆ.
ಹೆಚ್ಚು ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ಕಿಡ್ನಿ (Kidney) ಯೂರಿಕ್ ಆಮ್ಲವನ್ನು ತ್ವರಿತವಾಗಿ ಹೊರ ಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ಯಾವಾಗಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ನೀವು ಅಲಾರಂ ಫಿಕ್ಸ್ ಮಾಡಿ, ಆಗಾಗ ನೀರು ಕುಡಿಯುತ್ತಿದ್ದರೆ ಉತ್ತಮ ಆರೋಗ್ಯ ಕಾಪಾಡಲು ಸಹಾಯಕವಾಗಿದೆ.
ಆಲ್ಕೋಹಾಲ್ ನಿಂದ ದೂರವಿರಿ
ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ. ಇದು ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತದೆ. ನಿಮ್ಮ ಕಿಡ್ನಿ ಮೊದಲು ಯೂರಿಕ್ ಆಸಿಡ್ ಮತ್ತು ಇತರ ತ್ಯಾಜ್ಯಗಳ ಬದಲಿಗೆ ಆಲ್ಕೋಹಾಲ್ (alcohol) ನಿಂದ ಉಂಟಾಗುವ ಉತ್ಪನ್ನಗಳನ್ನು ಫಿಲ್ಟರ್ ಮಾಡಬೇಕಾಗಿರುವುದರಿಂದ ಯೂರಿಕ್ ಆಸಿಡ್ ಹೆಚ್ಚುತ್ತದೆ. ಬಿಯರ್ ನಂತಹ ಆಲ್ಕೋಹಾಲ್ ಹೆಚ್ಚಿನ ಪ್ರಮಾಣದ ಪ್ಯೂರಿನ್ ಗಳನ್ನು ಹೊಂದಿರುತ್ತದೆ.
ತೂಕ ಕಡಿಮೆ ಮಾಡಿ
ನೀವು ಅಧಿಕ ತೂಕ (overweight) ಹೊಂದಿದ್ದರೆ, ಅದು ಯೂರಿಕ್ ಆಸಿಡ್ ಅನ್ನು ಹೆಚ್ಚಿಸುತ್ತೆ, ಕೊಬ್ಬಿನ ಕೋಶಗಳು ಸ್ನಾಯು ಕೋಶಗಳಿಗಿಂತ ಹೆಚ್ಚು ಯೂರಿಕ್ ಆ್ಯಸಿಡ್ ತಯಾರಿಸುತ್ತವೆ. ಇದಲ್ಲದೆ, ಅಧಿಕ ತೂಕ ಹೊಂದಿರುವುದು ನಿಮ್ಮ ಕಿಡ್ನಿಗೆ ಯೂರಿಕ್ ಆಮ್ಲ ಫಿಲ್ಟರ್ ಮಾಡಲು ಕಷ್ಟವಾಗುತ್ತದೆ.
ಇನ್ಸುಲಿನ್ ಮಟ್ಟ ನಿಯಂತ್ರಿಸಿ
ನಿಮಗೆ ಮಧುಮೇಹವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸಿ. ಟೈಪ್ -2 ಮಧುಮೇಹ (Diabetes) ಹೊಂದಿರುವ ಜನರು ತಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅನ್ನು ಹೊಂದಿರುತ್ತಾರೆ. ಅತಿಯಾದ ಇನ್ಸುಲಿನ್ ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಮ್ಲಕ್ಕೆ ಕಾರಣವಾಗುತ್ತದೆ, ಜೊತೆಗೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಫೈಬರ್ ಆಹಾರ ಸೇವಿಸಿ
ಹೆಚ್ಚು ನಾರಿನಂಶವನ್ನು (Fiber) ತಿನ್ನುವುದರಿಂದ ನಿಮ್ಮ ದೇಹದಿಂದ ಯೂರಿಕ್ ಆಸಿಡ್ ನಿವಾರಣೆಯಾಗುತ್ತೆ. ಫೈಬರ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ತಾಜಾ ಹಣ್ಣುಗಳು, ಒಣ ಹಣ್ಣುಗಳು, ತಾಜಾ ತರಕಾರಿಗಳು, ಓಟ್ಸ್, ಬೀಜಗಳು, ಬಾರ್ಲಿಯನ್ನು ಆಹಾರದಲ್ಲಿ ಸೇರಿಸಿ.
ಒತ್ತಡ ದೂರ ಮಾಡಿ
ಒತ್ತಡ, ಕಳಪೆ ನಿದ್ರೆಯ ಅಭ್ಯಾಸಗಳು ಮತ್ತು ವ್ಯಾಯಾಮದ ಕೊರತೆಯು ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಹೆಚ್ಚಿಸುತ್ತೆ. ಪ್ರತಿದಿನ ಸರಿಯಾಗಿ ಧ್ಯಾನ ಮಾಡಿ, ಉಸಿರಾಟದ ವ್ಯಾಯಾಮಗಳನ್ನು ಮಾಡಿ ಮತ್ತು ಒತ್ತಡದ ಮಟ್ಟವನ್ನು (Stress Level) ಕಡಿಮೆ ಮಾಡಲು ಯೋಗ ಮಾಡಿ. ಅಲ್ಲದೆ, ನಿದ್ರೆಯನ್ನು ಸುಧಾರಿಸಿ. ಮಲಗುವಾಗ ಮೊಬೈಲ್ ಟ್ಯಾಬ್ ದೂರವಿಡಿ. ಮಲಗುವ ಮತ್ತು ಎಚ್ಚರಗೊಳ್ಳುವ ಸಮಯವನ್ನು ನಿರ್ಧರಿಸಿ. ಮಧ್ಯಾಹ್ನದ ಊಟದ ಸಮಯದಲ್ಲಿ ಕೆಫೀನ್ ತೆಗೆದುಕೊಳ್ಳಬೇಡಿ.
ಆಹಾರ, ವ್ಯಾಯಾಮಗಳು ಮತ್ತು ಆರೋಗ್ಯಕರ ಲೈಫ್ ಸ್ಟೈಲ್ ಹೆಚ್ಚಿದ ಯೂರಿಕ್ ಆಮ್ಲದಿಂದ ಉಂಟಾಗುವ ರೋಗಗಳನ್ನು ಸುಧಾರಿಸುತ್ತದೆ, ಆದರೆ ಇವು ಔಷಧಿಗಳಿಗೆ ಬದಲಿಯಾಗಲು ಸಾಧ್ಯವಿಲ್ಲ. ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು, ನಿಮ್ಮ ಜೀವನಶೈಲಿಯಲ್ಲಿ (Lifestyle) ಬದಲಾವಣೆಗಳನ್ನು ಮಾಡುವುದು ಯೂರಿಕ್ ಆಸಿಡ್ ಕಂಟ್ರೋಲ್ ಮಾಡಲು ಸಹಾಯಕವಾಗಿವೆ.