ಅತಿಯಾದ ವಿದ್ಯುತ್ ಬಿಲ್: ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಉಪಾಯ
ಮನೆಯ ಕೋಣೆಯಲ್ಲಿ ಯಾರು ಇಲ್ಲದಿದ್ದರೂ ಫ್ಯಾನ್ ಮತ್ತು ಲೈಟ್ ಹಾಗೆಯೇ ಇದ್ದರೆ ತಿಂಗಳ ವಿದ್ಯುತ್ ಬಿಲ್ ಜಾಸ್ತಿ ಬರುವುದು ಗ್ಯಾರಂಟಿ. ಕೋಣೆಯಿಂದ ಹೊರ ಬರುವಾಗ ಲೈಟ್ ಆರಿಸಿ ಬನ್ನಿ. ವಿದ್ಯುತ್ ಬಿಲ್ ಜಾಸ್ತಿ ಬರುತ್ತೆ ಅಂತ ಮನೆಯಲ್ಲಿ ಹಿರಿಯರು ಕಿರಿಯರಿಗೆ ಅನೇಕ ಬಾರಿ ಹೇಳುವುದುಂಟು. ಮಿತವಾಗಿ ಮತ್ತು ಎಲ್ಲಿಯೂ ವ್ಯರ್ಥವಾಗದಂತೆ ವಿದ್ಯುತ್ ಶಕ್ತಿ ಬಳಸಿದರೆ ಒಳ್ಳೆಯದು.
ಮನೆಯಲ್ಲಿ ವಿದ್ಯುತ್ ಶಕ್ತಿಯನ್ನು ಮಿತವಾಗಿ ಬಳಸಲು ಈ ಕೆಳಗಿನ ಟಿಪ್ಸ್‌ಗಳನ್ನು ಪಾಲಿಸಿದರೆ ಸಾಕು ಮುಂದಿನ ತಿಂಗಳು ವಿದ್ಯುತ್ ಬಿಲ್ ಎಷ್ಟರ ಮಟ್ಟಿಗೆ ಕಡಿಮೆಯಾಗುತ್ತೆ ಎಂಬ ವ್ಯತ್ಯಾಸವನ್ನು ನೀವೇ ನೋಡಿ.
1. ಎಲ್ಇಡಿ ಬಲ್ಬ್‌ಗಳನ್ನು ಉಪಯೋಗಿಸಿ: ಬೇರೆ ಬಲ್ಬ್‌ಗಿಂತಲೂ ಎಲ್ಇಡಿ ಬಲ್ಬ್‌ಗಳು ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸುತ್ತವೆ ಮತ್ತು ಈ ಬಲ್ಬ್‌ಗಳ ನೀಡುವ ಬೆಳಕು ನೈಸರ್ಗಿಕವಾದ ಬೆಳಕಿನಂತೆ ಇರುತ್ತದೆ ಮತ್ತು ಇವು ತುಂಬಾ ದಿನಗಳ ಕಾಲ ಬಾಳಿಕೆಗೆ ಬರುತ್ತವೆ.
2. ಉಪಯೋಗಿಸದಿದ್ದಾಗ ಸ್ವಿಚ್ ಆಫ್ ಮಾಡಿ: ಉಪಯೋಗಿಸದೆ ಇರುವಾಗ ಲೈಟ್, ಫ್ಯಾನ್ ಮತ್ತು ಸ್ವಿಚ್‌ಗಳನ್ನು ಆಫ್ ಮಾಡಿ, ಏಕೆಂದರೆ ಉಪಯೋಗಿಸದೆ ಇರುವ ಸಮಯದಲ್ಲಿ ಸ್ವಿಚ್‌ಗಳನ್ನು ಹಾಗೆಯೇ ಬಿಟ್ಟರೆ ವಿದ್ಯುತ್ ಶಕ್ತಿ ಸರಬರಾಜು ಆಗುತ್ತಿರುತ್ತದೆ ಮತ್ತು ಬಿಲ್ ಸಹ ಏರುತ್ತಲೇ ಇರುತ್ತದೆ. ಎಲ್ಇಡಿ ಬಲ್ಬ್ ಉಪಯೋಗಿಸದೆ ಇದ್ದಾಗ ಅದರ ಸ್ವಿಚ್ ಆಫ್ ಮಾಡಿರಿ, ಹಾಗೆ ಮಾಡುವುದರಿಂದ ವಿದ್ಯುತ್ ಶಕ್ತಿ ಸರಬರಾಜನ್ನು ನಿಲ್ಲಿಸಬಹುದು.
3. ಫ್ರಿಡ್ಜ್ ಹಿಂದಿನ ಕಾಯಿಲ್‌ಗಳನ್ನು ಸ್ವಚ್ಛ ಮಾಡಿರಿ: ವರ್ಷಕ್ಕೆ ಎರಡು ಬಾರಿಯಾದರೂ ಫ್ರಿಡ್ಜ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ ಅದರ ಹಿಂದಿನ ಕಾಯಿಲ್‌ಗಳನ್ನು ಸ್ವಚ್ಛ ಮಾಡಿರಿ. ಏಕೆಂದರೆ ಆ ಕಾಯಿಲ್‌ಗಳಲ್ಲಿ ಧೂಳು ಕುಳಿತು ಅದರ ಕಾರ್ಯಕ್ಷಮತೆ ಕಡಿಮೆಯಾಗಿ ಹೆಚ್ಚು ವಿದ್ಯುತ್ ಬಳಸಬಹುದು. ಅದಕ್ಕಾಗಿ ಫ್ರಿಡ್ಜ್‌ನ ಕಾಯಿಲ್‌ಗಳನ್ನು ಆಗಾಗ ಸ್ವಚ್ಛ ಮಾಡಿರಿ.
4. ಅಡುಗೆ ಮಾಡುವಾಗ ಜಾಗ್ರತೆ ವಹಿಸಿ: ಅಡುಗೆಯನ್ನು ವಿದ್ಯುತ್ ಶಕ್ತಿ ಬಳಸುವಂತಹ ಒಲೆಯ ಮೇಲೆ ಮಾಡುತ್ತಿದ್ದರೆ ಅದರ ಮೇಲೆ ಯಾವ ರೀತಿಯ ಪಾತ್ರೆಗಳನ್ನು ಇಟ್ಟರೆ ಅಡುಗೆ ಬೇಗ ಆಗುವುದು ಎಂದು ತಿಳಿದುಕೊಳ್ಳಿ. ಸುಮ್ಮನೆ ಯಾವುದೋ ಪಾತ್ರೆಯನ್ನು ಇಟ್ಟರೆ ತುಂಬಾ ಸಮಯ ತೆಗೆದು ಕೊಳ್ಳುತ್ತೆ ಮತ್ತು ಹೆಚ್ಚಿನ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಸಹ ಇದು ತೆಗೆದುಕೊಳ್ಳುತ್ತದೆ.
5. ಬಟ್ಟೆ ಒಗೆಯುವಾಗ ಕಡಿಮೆ ವಿದ್ಯುತ್ ಶಕ್ತಿ ಬಳಸಬಹುದು: ಮನೆಯಲ್ಲಿ ವಾಷಿಂಗ್ ಮಶೀನ್ ಇದ್ದರೆ ಅದರಲ್ಲಿ ಬಟ್ಟೆಗಳನ್ನು ಹಾಕಿ ಒಗೆಯುವ ಮುನ್ನ ಅದರಲ್ಲಿ ಕ್ವಿಕ್ ವಾಷ್ ಆಯ್ಕೆ ಮಾಡಿದರೆ ಬೇಗನೆ ಬಟ್ಟೆಗಳನ್ನು ಒಗೆದು ಕೊಡುತ್ತದೆ ಮತ್ತು ಕಡಿಮೆ ವಿದ್ಯುತ್ ಶಕ್ತಿ ಬಳಸಬಹುದಾಗಿದೆ. ಇಲ್ಲ ಅಂದ್ರೆ ನಾರ್ಮಲ್ ಮೋಡ್ ನಲ್ಲಿ ಬಟ್ಟೆ ಒಗೆಯಲು ವಾಷಿಂಗ್ ಮಶೀನ್‌ನಲ್ಲಿ ಹಾಕಿದರೆ ಅದು ತುಂಬಾ ಸಮಯ ತೆಗೆದುಕೊಳ್ಳುತ್ತೆ, ಇದರಿಂದ ತುಂಬಾ ವಿದ್ಯುತ್ ಶಕ್ತಿ ವ್ಯಯವಾಗುತ್ತದೆ.
6. ಸೂರ್ಯನ ಬೆಳಕನ್ನು ಉಪಯೋಗಿಸಿ: ಮನೆಯಲ್ಲಿ ದಿನವಿಡಿ ಕಿಟಕಿಗಳನ್ನು ತೆರೆದಿಡಿ. ಅದರಿಂದ ಸೂರ್ಯನ ಬೆಳಕನ್ನು ಉಪಯೋಗಿಸಬಹುದು ಮತ್ತು ಲೈಟ್ ಉರಿಸುವುದು ನಿಲ್ಲುತ್ತದೆ ಮತ್ತು ಬಲ್ಬ್‌ಗಳ ಲೈಟ್‌ಗಿಂತಲೂ ಸೂರ್ಯನ ಬೆಳಕು ತುಂಬಾ ಒಳ್ಳೆಯದು ಮತ್ತು ವಿದ್ಯುತ್ ವ್ಯಯವಾಗುವುದನ್ನು ತಪ್ಪಿಸಬಹುದು.
7. ನಿಮಗೆ ಬೇಕಾದ ವಿದ್ಯುತ್ ನೀವೇ ಉತ್ಪತ್ತಿ ಮಾಡಿಕೊಳ್ಳಿ: ನಿಜವಾಗಲೂ ವಿದ್ಯುತ್ ಶಕ್ತಿಯನ್ನು ಬಳಸುವುದು ಕಡಿಮೆ ಮಾಡಬೇಕೆಂದರೆ ಮನೆಯ ಮೇಲೆ ಸೌರಶಕ್ತಿ ಉತ್ಪಾದಿಸುವಂತಹ ಸೋಲಾರ್ ಪ್ಯಾನಲ್ಸ್ ಹಾಕಿಸಿಕೊಳ್ಳಿ ಮತ್ತು ಇನ್ನಿತರೆ ಮಾರ್ಗಗಳನ್ನು ಅನುಸರಿಸುವುದರಿಂದಲೂ ಕಡಿಮೆ ವಿದ್ಯುತ್ ಶಕ್ತಿ ಬಳಸಬಹುದಾಗಿದೆ. ಆರಂಭದಲ್ಲಿ ಹಣ ಹಾಕಿದರೂ ನಂತರದಲ್ಲಿ ವಿದ್ಯುತ್ ಬಿಲ್‌ನಲ್ಲಿ ಆ ವ್ಯತ್ಯಾಸ ಕಾಣಿಸುತ್ತದೆ.
8. ಫ್ಯಾನ್ ಬಳಸುವ ಬದಲು ಕಿಟಕಿಗಳನ್ನು ತೆರೆದುಕೊಳ್ಳಿ: ಸುಮ್ಮನೆ ಶೆಕೆ ಆಗುತ್ತಿದೆ ಎಂದು ಫ್ಯಾನ್ ಹಾಕಿಕೊಳ್ಳದೆ ಕಿಟಕಿಯನ್ನು ತೆರೆದಿಟ್ಟುಕೊಂಡರೂ ಹೊರಗಡೆಯಿಂದ ಶುದ್ಧವಾದ ಗಾಳಿ ಬರುತ್ತದೆ. ಕೇವಲ ರಾತ್ರಿ ಸಮಯದಲ್ಲಿ ಕಿಟಕಿಯಿಂದ ಸೊಳ್ಳೆಗಳು ಬರಬಹುದು ಎಂದಾಗ ರಾತ್ರಿ ಕಿಟಕಿಯನ್ನು ಮುಚ್ಚಿಕೊಂಡು ಫ್ಯಾನ್ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದಲೂ ಸಹ ತುಂಬಾ ವಿದ್ಯುತ್ ಶಕ್ತಿ ಉಳಿಸಬಹುದಾಗಿದೆ.
ಇವೆಲ್ಲಾ ಕೇಳಲು ತುಂಬಾ ಚಿಕ್ಕ ಪುಟ್ಟ ವಿಷಯಗಳು ಅನ್ನಿಸಬಹುದು. ಆದರೆ ಇವುಗಳನ್ನು ಮನೆಯಲ್ಲಿ ಒಮ್ಮೆ ಪಾಲಿಸಿ ನೋಡಿದರೆ ತಿಳಿಯುತ್ತದೆ ಇದರಿಂದಾಗುವ ಲಾಭಗಳು. ಖಂಡಿತವಾಗಿಯೂ ಈ ಮೇಲಿನ ಟಿಪ್ಸ್ ಗಳು ಮನೆಯ ತಿಂಗಳ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುತ್ತದೆ.