ಮಧುಮೇಹಕ್ಕೆ ದಾಲ್ಚಿನ್ನಿ ಒಂದೊಳ್ಳೆ ಮದ್ದು, ಅಪಾಯವೂ ಇದೆ ಜೋಪಾನ!
ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಮೊದಲು, ಮಧುಮೇಹವು ಜನರನ್ನು ವೇಗವಾಗಿ ಬಾಧಿಸುತ್ತಿದ್ದ ರೋಗವಾಗಿತ್ತು. ಆದಾಗ್ಯೂ, ರೋಗವು ಇನ್ನೂ ಜನರನ್ನು ತನ್ನ ಬೇಟೆಯನ್ನಾಗಿ ಮಾಡುತ್ತಿದೆ. ಇದು ವಿಶ್ವದಲ್ಲಿಯೇ ಸಾಮಾನ್ಯವಾಗಿ ಕಂಡುಬರುವ ರೋಗಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರೋಗವು ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ, ಅದನ್ನು ಹೆಚ್ಚು ಕಾಳಜಿ ವಹಿಸಬೇಕಾಗಿದೆ.
ಮಧುಮೇಹವು ಯಾವುದೇ ಚಿಕಿತ್ಸೆಯಿಲ್ಲದ ರೋಗ. ಆಹಾರ ಮತ್ತು ಜೀವನಶೈಲಿ ಬದಲಾವಣೆಗಳಿಂದ ಇದನ್ನು ನಿಯಂತ್ರಿಸಬಹುದು. ಆದರೆ ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ. ಮಧುಮೇಹವನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಈ ರೋಗವು ಕ್ರಮೇಣ ದೇಹದ ಇತರೆ ಭಾಗಗಳ ಮೇಲೂ ಪರಿಣಾಮ ಬೀರಬಹುದು.
ಮಧುಮೇಹಿಗಳು ರಕ್ತದದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಔಷಧಿಗಳು ಮತ್ತು ಇನ್ಸುಲಿನ್ ಸಹಾಯ ತೆಗೆದುಕೊಳ್ಳುತ್ತಾರೆ. ಆಹಾರದ ಸಹಾಯದಿಂದ ಇದನ್ನು ನಿಯಂತ್ರಣದಲ್ಲಿಡಬಹುದು. ಅದರಲ್ಲೂ ದಾಲ್ಚಿನ್ನಿಯನ್ನು ಆಹಾರದಲ್ಲಿ ಬಳಸಿದರೆ ತುಂಬಾ ಉತ್ತಮ.
ದಾಲ್ಚಿನ್ನಿ ಮತ್ತು ಮಧುಮೇಹ
ದಾಲ್ಚಿನ್ನಿ ಸಾಮಾನ್ಯವಾಗಿ ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಕಂಡು ಬರುವ ಮಸಾಲೆ. ದಾಲ್ಚಿನ್ನಿ ತಿನ್ನಲು ರುಚಿಕರ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ವಿಶೇಷವಾಗಿ ಇದರಲ್ಲಿಇರುವ ಅನೇಕ ಔಷಧೀಯ ಗುಣಗಳು ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದಲೇ ಮಧುಮೇಹ ಮತ್ತು ದಾಲ್ಚಿನ್ನಿಯನ್ನು ಒಂದು ವಿಶೇಷ ಸಂಬಂಧವೆಂದು ಪರಿಗಣಿಸಲಾಗುತ್ತದೆ.
ಮಧುಮೇಹ ರೋಗಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ದಾಲ್ಚಿನ್ನಿಯನ್ನು ಬಳಸುವಂತೆ ಸೂಚಿಸಲಾಗಿದೆ.
ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾದಾಗ ಸಕ್ಕರೆ ಅನಿಯಂತ್ರಿತವಾಗುತ್ತದೆ. ಈ ಸಂದರ್ಭದಲ್ಲಿ ದಾಲ್ಚಿನ್ನಿಯು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಮೂಲಕ ಸಮಸ್ಯೆಯನ್ನು ನಿವಾರಿಸುತ್ತದೆ.
ದಾಲ್ಚಿನ್ನಿಯ ಪ್ರಯೋಜನಗಳು
ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ: ಆಂಟಿ ಆಕ್ಸಿಡೆಂಟ್ ಗಳು ಮಾನವ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಇವು ದೇಹದ ಜೊತೆಗೆ ಚರ್ಮ ಮತ್ತು ಕೂದಲಿಗೆ ಒಳ್ಳೆಯದು.
ಉರಿಯೂತ ನಿವಾರಕ ಗುಣಗಳು: ದಾಲ್ಚಿನ್ನಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ, ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ದಾಲ್ಚಿನ್ನಿ ಹಾನಿಗೂ ಕಾರಣವಾಗಬಹುದು
ದಾಲ್ಚಿನ್ನಿಯಂತಹ ಅದ್ಭುತ ಮಸಾಲೆಗಳ ಪ್ರಯೋಜನಗಳು ಅನೇಕವಾಗಿದ್ದರೂ, ಇದರ ಅತಿಯಾದ ಬಳಕೆಯು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ.
ದಾಲ್ಚಿನ್ನಿಯ ಅನಿಯಂತ್ರಿತ ಸೇವನೆಯು ಕ್ಯಾನ್ಸರ್ ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಬಾಯಿ ಹುಣ್ಣುಗಳು, ಕಡಿಮೆ ರಕ್ತ ಗ್ಲುಕೋಸ್ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು.
ಆಹಾರದಲ್ಲಿ ದಾಲ್ಚಿನ್ನಿಯನ್ನು ಸೇರಿಸುವ ಮೊದಲು ವೈದ್ಯರು ಅಥವಾ ಆಹಾರ ತಜ್ಞರೊಂದಿಗೆ ಮಾತನಾಡಲು ಮರೆಯದಿರಿ. ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದರೆ ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.