ಯಮಲೋಕದಲ್ಲಿ ಮಾತ್ರವಲ್ಲ! ಭೂಮಿ ಮೇಲೂ ಇದೆ ಯಮನ ದೇಗುಲ, ಅಲ್ಲಿ ಹೋಗೋಕೆ ಜನ್ರಿಗೆ ಭಯ!
ಯಮರಾಜನ ದೇವಾಲಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇಲ್ಲದಿದ್ದರೆ, ನಾವು ಇಂದು ನಿಮಗೆ ಭಾರತದಲ್ಲಿರೋ ಯಮನಿಗೆ ಮೀಸಲಾದ ದೇಗುಲದ ಬಗ್ಗೆ ಹೇಳ್ತೀವಿ ಕೇಳಿ. .
ಭಾರತದಲ್ಲಿ ಒಂದಕ್ಕಿಂತ ಹೆಚ್ಚು ವಿಶಿಷ್ಟ ಆಚರಣೆ, ಸಂಪ್ರದಾಯ, ತಾಣಗಳಿವೆ, ಹೆಚ್ಚಿನ ವಿಷ್ಯಗಳ ಬಗ್ಗೆ ಹಲವು ಜನರಿಗೆ ತಿಳಿದಿಲ್ಲ. ಇವುಗಳಲ್ಲಿ ಯಮರಾಜನ ದೇವಾಲಯವೂ (Yamaraj Temple) ಒಂದು. ಈ ವಿಶಿಷ್ಟ ಮತ್ತು ಯಮನ ಏಕೈಕ ದೇವಾಲಯವು ಹಿಮಾಚಲ ಪ್ರದೇಶದಲ್ಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜನರು ಯಮರಾಜನ ಹೆಸರು ಕೇಳಿದ್ರೆ ಸಾಕು ಹೆದರುತ್ತಾರೆ, ಏಕೆಂದರೆ ಅವನನ್ನು ಸಾವಿನ ದೇವರು (God of Death) ಎಂದು ಪರಿಗಣಿಸಲಾಗುತ್ತದೆ. ಯಮಲೋಕದಲ್ಲಿಯೇ ಯಮ ಇರುತ್ತಾನೆ ಎನ್ನುವ ನಂಬಿಕೆಯೂ ಇದೆ. ಆದರೆ ಈ ಭೂಮಿ ಮೇಲೆ ಯಮನ ದೇಗುಲ ಇದೆ ಅನ್ನೋದು ಗೊತ್ತಾ? ಯಮ ಸಾವಿನ ದೇವತೆಯಾಗಿರೋ ಕಾರಣಕ್ಕಾಗಿಯೇ ಜನರು ಈ ದೇವಾಲಯಕ್ಕೆ ಭೇಟಿ ನೀಡಲು ಹಿಂಜರಿಯುತ್ತಾರೆ.
ಯಮನ ಈ ವಿಶಿಷ್ಟ ದೇವಾಲಯವು ಅನೇಕ ರಹಸ್ಯಗಳಿಂದ ತುಂಬಿದೆ. ಮರಣದ ನಂತರ, ಆತ್ಮ ಮೊದಲು ಈ ದೇವಾಲಯಕ್ಕೆ ಬರುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಇಲ್ಲಿಂದ ಅವರು ಸ್ವರ್ಗ ಪಡೆಯುತ್ತಾರೆಯೇ ಅಥವಾ ನರಕವನ್ನು ಪಡೆಯುತ್ತಾರೆಯೇ ಎಂದು ನಿರ್ಧರಿಸಲಾಗುತ್ತದೆಯಂತೆ. ಯಮರಾಜ ದೇವಾಲಯ ಎಲ್ಲಿದೆ? ಮತ್ತು ಅದರ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಯಲು ಮುಂದೆ ಓದಿ.
ಭಾರತದಲ್ಲಿ ಯಮರಾಜನ ದೇವಾಲಯ ಎಲ್ಲಿದೆ?
ಯಮರಾಜನ ಈ ವಿಶಿಷ್ಟ ದೇವಾಲಯವು ಹಿಮಾಚಲ ಪ್ರದೇಶದ (Himachal Pradesh) ಚಂಬಾ ಜಿಲ್ಲೆಯ ಭರ್ಮೌರ್ ನಲ್ಲಿದೆ. ಈ ದೇವಾಲಯವು ನೋಡಲು ತುಂಬಾ ಚಿಕ್ಕದಾಗಿ ಕಾಣುತ್ತದೆ, ಇದೊಂದು ಪುಟ್ಟ ಮನೆಯಂತೆ ಇದೆ. ಆದರೆ, ಈ ದೇಗುಲದ ವೈಭವವು ಪ್ರಪಂಚದಾದ್ಯಂತ ಹರಡಿದೆ ಮತ್ತು ಇದು ವಿಶ್ವದ ಏಕೈಕ ಯಮರಾಜನ ದೇವಾಲಯ. ಎತ್ತರದ ಪರ್ವತಗಳ ನಡುವೆ ಇರುವ ಧರ್ಮರಾಜನ ಈ ವಿಶೇಷ ದೇವಾಲಯವನ್ನು ಯಾವಾಗ ಮತ್ತು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಆರನೇ ಶತಮಾನದಲ್ಲಿ ಚಂಬಾದ ರಾಜ ಈ ದೇವಾಲಯವನ್ನು ನವೀಕರಿಸಿದನೆಂದು ಇತಿಹಾಸ ಹೇಳುತ್ತದೆ.
ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ
ಮರಣದ ನಂತರ, ಆತ್ಮವು ಮೊದಲು ಈ ದೇವಾಲಯಕ್ಕೆ ಬರುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಚಿತ್ರಗುಪ್ತ ವ್ಯಕ್ತಿಯ ಪಾಪ ಮತ್ತು ಪುಣ್ಯಗಳ ವಿವರಗಳನ್ನು ನೋಡುತ್ತಾನೆ ಮತ್ತು ಅವನಿಗೆ ಸ್ವರ್ಗ ಅಥವಾ ನರಕ ಸಿಗುತ್ತದೆಯೇ ಎಂದು ನಿರ್ಧರಿಸುತ್ತಾನೆ. ಅದರ ನಂತರ, ಯಮರಾಜನು ಆ ಆತ್ಮವನ್ನು ತನ್ನೊಂದಿಗೆ ನರಕಕ್ಕೆ ಅಥವಾ ಸ್ವರ್ಗಕ್ಕೆ (Hell and Heaven) ಕರೆದೊಯ್ಯುತ್ತಾನೆ.
ಯಮನ ಮತ್ತು ಸಾವಿನ ಭಯದಿಂದ ಈ ದೇವಾಲಯಕ್ಕೆ ಹೋಗಲು ಯಾರೂ ಬಯಸುವುದಿಲ್ಲ. ಜನರು ಈ ದೇಗುಲದ ಹತ್ತಿರ ಸುಳಿಯೋದಕ್ಕೂ ಹೆದರುತ್ತಾರೆ. ಇದು ಮಾತ್ರವಲ್ಲ, ಜನರು ದೇವಾಲಯವನ್ನು ನೋಡಿ, ಹೊರಗಿನಿಂದಲೇ ಕೈ ಮುಗಿದು, ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಒಳಗೆ ಹೋದರೆ, ಹೊರಗೆ ಬರಲು ಸಾಧ್ಯವೇ ಇಲ್ಲ ಎಂದು ಅವರಿಗೆ ಅನಿಸುತ್ತದೆ. ಹಾಗಾಗಿ ಅದರೊಳಗೆ ಜನ ಹೋಗೋದೆ ಇಲ್ಲ.
ಚಿತ್ರಗುಪ್ತನ ಕೋಣೆಯು ದೇವಾಲಯದ ಆವರಣದಲ್ಲಿದೆ
ಈ ದೇವಾಲಯದ ಒಳಗೆ ಒಂದು ಖಾಲಿ ಕೋಣೆಯನ್ನು ಕಾಣಬಹುದು. ಇದನ್ನು ಚಿತ್ರಗುಪ್ತನ ಕೋಣೆ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಸತ್ತಾಗ, ಯಮನ ದೂತರು ಅವನ ಆತ್ಮವನ್ನು ಚಿತ್ರಗುಪ್ತನ (Chitragupta) ಬಳಿಗೆ ತರುತ್ತಾರಂತೆ. ಚಿತ್ರಗುಪ್ತ ದೇವನು ಇಲ್ಲಿ ಆತ್ಮದ ಕಾರ್ಯಗಳ ಬಗ್ಗೆ ವಿವರಣೆ ಬರೆಯುತ್ತಾನೆ. ಇದರ ನಂತರ, ಅವನನ್ನು ಚಿತ್ರಗುಪ್ತನ ಮುಂಭಾಗದ ಕೋಣೆಗೆ ಅಂದರೆ ಯಮರಾಜನ ಆಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಇಲ್ಲಿ ಕೆಲವು ಕ್ರಿಯೆಗಳಿವೆ. ನಂತರ ವ್ಯಕ್ತಿಯ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಬೇಕೇ ಅಥವಾ ನರಕಕ್ಕೆ ಕಳುಹಿಸಬೇಕೇ ಎಂದು ನಿರ್ಧರಿಸಲಾಗುತ್ತದೆ. ಈ ದೇವಾಲಯದಲ್ಲಿ ತಾಮ್ರ, ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ನಾಲ್ಕು ದ್ವಾರಗಳನ್ನೂ ಕಾಣಬಹುದು. ಇದು ಸ್ವರ್ಗ ನರಕಕ್ಕೆ ದಾರಿಗಳಿರಬಹುದು ಎನ್ನುವ ನಂಬಿಕೆ ಇದೆ.