ರಾಯರ ಸನ್ನಿಧಿಯಲ್ಲಿ ಸುಧಾ ಮೂರ್ತಿ: ಭಕ್ತಿಯಿಂದ ಪಾದಪೂಜೆ ಮತ್ತು ಪ್ರಾರ್ಥನೆ
ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮತಿ ಸುಧಾ ಮೂರ್ತಿಯವರು ರಾಯರ ಬೃಂದಾವನಕ್ಕೆ ಆಗಮಿಸಿ ದರ್ಶನ ಪಡೆದರು.

ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ರಾಯರ ಬೃಂದಾವನದಲ್ಲಿ ಭಕ್ತಿಯಿಂದ ಪೂಜಾ ಕಾರ್ಯಗಳು ಜರಗಿದವು. ಈ ಸಂದರ್ಭದಲ್ಲಿ ಖ್ಯಾತ ಸಮಾಜಸೇವಕಿ ಹಾಗೂ ಲೇಖಕಿ ಶ್ರೀಮತಿ ಸುಧಾ ಮೂರ್ತಿಯವರು ಗುರುರಾಯರ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದರು.
ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ರಾಯರ ಬೃಂದಾವನದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಐದು ತರದ ಹಣ್ಣುಗಳಿಂದ ಅಭಿಷೇಕ ನೆರವೇರಿಸಲಾಯಿತು. ಅನಂತರ ಭಕ್ತರು ಸನ್ನಿಧಿಯಲ್ಲಿ ಸಂಕಲ್ಪ ಮಾಡಿಕೊಂಡು ಗುರುಪಾದಪೂಜೆ ಸಲ್ಲಿಸಿ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುರಾಯರ ಅನುಗ್ರಹವನ್ನು ಪಡೆದರು.
ಶ್ರೀಮತಿ ಸುಧಾ ಮೂರ್ತಿಯವರು ಪ್ರಹ್ಲಾದ ರಾಜರ ಮುಂಭಾಗದಲ್ಲಿ ಸಂಕಲ್ಪ ಮಾಡಿಕೊಂಡು ಪಾದಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು, “ಲೋಕಕ್ಕೆ ಒಳ್ಳೆಯದಾಗಬೇಕು” ಎಂಬ ಪ್ರಾರ್ಥನೆಯೊಂದಿಗೆ ಸಂಕಲ್ಪವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರು, ಜಿಕೆ ಆಚಾರ್ಯರು ಹಾಗೂ ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು. ಹಿರಿಯ ವ್ಯವಸ್ಥಾಪಕರು ಸುಧಾ ಮೂರ್ತಿಯವರಿಗೆ ಫಲ ಮಂತ್ರಾಕ್ಷತೆ ನೀಡಿ, “ರಾಘವೇಂದ್ರ ಸ್ವಾಮಿಗಳ ಅನುಗ್ರಹ ಸದಾ ಕಾಲ ಇರಲಿ” ಎಂದು ಆಶೀರ್ವದಿಸಿದರು.