ಇಲ್ಲಿವೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹತ್ತು ನುಡಿ ಮುತ್ತು..
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎನ್ನುವಂತೆ ಮುತ್ತಿನಂತ ಮಾತುಗಳನ್ನು ತಮ್ಮ ಪ್ರವಚನ ಮುಖೇನ ಹೇಳುತ್ತಿದ್ದವರು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಅವರು ಹೇಳಿದ 10 ಮುತ್ತಿನಂತಾ ಮಾತುಗಳು ನಿಮಗಾಗಿ..
ಸೂರ್ಯನ ಕಿರಣಗಳು ಕೊಳಕು ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ ಆಗಬೇಕು. ಯಾವ ಜಾಗಕ್ಕೆ ಹೋದರೂ, ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು.
ಗೆದ್ದವರಷ್ಟೇ ಬದುಕಿನ ಪಾಠ ಹೇಳಬೇಕಿಲ್ಲ. ಸೋತವರು ಅದಕ್ಕಿಂತಲೂ ಚೆಂದದ ಪಾಠ ಕಲಿತಿರುತ್ತಾರೆ. ಅವರಿಂದಲೂ ಅನುಭವದ ಪಾಠ ಕಲಿಯಬಹುದು.
ಮಣ್ಣಿನಿಂದಾದ ಗಡಿಗೆಯು ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಗಡಿಗೆಯೊಳಗೆ ಮಣ್ಣು ಕಾಣುವುದಿಲ್ಲ. ಆದರೆ ಅದು ಅಲ್ಲಿ ವ್ಯಾಪಿಸಿದೆ. ಅಂತೆಯೇ ಜಗದೀಶನು ಪ್ರಪಂಚದ ತುಂಬಾ ವ್ಯಾಪಿಸಿದ್ದಾನೆ. ಆದರೆ, ಆತ ಕಾಣುವುದಿಲ್ಲ.
ಮಡದಿ ಬಂದ ಮೇಲೆ ಒಡಹುಟ್ಟಿದವರು ಭಾರ, ಆಸ್ತಿ ಭಾಗವಾದ ಮೇಲೆ ಹೆತ್ತವರು ಭಾರ, ಗಂಡ ತೊರೆದ ಹೆಣ್ಣು ತವರಿಗೆ ಭಾರ, ಮೋಹ ಕಳೆದ ಮೇಲೆ ಸಂಸಾರ ಭಾರ, ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರ
ಇರೋದು ಇರುತ್ತದೆ ಹೋಗೋದು ಹೋಗುತ್ತದೆ
ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮದಾನಿಯಾಗಿರಬೇಕು
ಇದೆ ಸುಖ ಜೀವನದ ಸೂತ್ರ.
ನಮ್ಮ ಸಾಧನೆಯು ಪ್ರಾಪಂಚಿಕವೇ ಆಗಿರಲಿ, ಪಾರಮಾರ್ಥಿಕವೇ ಆಗಿರಲಿ, ಅದು ಸಿದ್ಧಿಯ ಶ್ರೀಗಿರಿ ತಲುಪುವುದಕ್ಕೆ ಅನನ್ಯ ಪ್ರಾರ್ಥನೆ ಅಥವಾ ತೀವ್ರವಾದ ಹಂಬಲ, ಬಯಕೆ ಅತ್ಯವಶ್ಯ.
ಯಾರ ನೋವಿಗೆ ಯಾರು ಹೊಣೆಗಾರರು
ನಿನ್ನ ಕಣ್ಣೀರಿಗೆ ಯಾರು ಮರುಗುವರು
ನಿನಗೆ ನೀನೇ ಮಿತ್ರ ನಿನಗೆ ನೀನೇ ಶತ್ರು
ನಿನ್ನಿಂದಲೇ ಶಾಂತಿ ನಿನ್ನಿಂದಲೇ ಕ್ರಾಂತಿ!
ಮನೆ ಕಟ್ಟುವಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ. ನಂತರ ಗೃಹಪ್ರವೇಶಕ್ಕೆ ಎಲ್ಲರೂ ಬಂದು ಹಾರೈಸಿ ಉಡುಗೊರೆ ನೀಡುತ್ತಾರೆ. ಹಾಗೆ ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರೂ ಸಹಾಯ ಮಾಡುವುದಿಲ್ಲ. ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ. ಇದೇ ನಿಜವಾದ ಪ್ರಪಂಚ.
ನಾವು ಮಾಡುವ ಸಣ್ಣ ಸಹಾಯವೂ ಕಷ್ಟದಲ್ಲಿರುವವರಿಗೆ ಅಪಾರ ಎನಿಸಬಹುದು. ಪರೋಪಕಾರ ನಮ್ಮ ಬದುಕಿನ ಧ್ಯೇಯವಾಗಲಿ. ಮತ್ತೊಬ್ಬರ ಬದುಕು ಬೆಳಗೋಣ.
ಕೊಪ್ಪಳ ಗವಿಮಠ ಸಂಸ್ಥಾನದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಿದ್ಧೇಶ್ವರರಿಗೆ ನುಡಿನಮನ ಸಲ್ಲಿಸಿದ್ದು ಹೀಗೆ-
ಯಾವುದೇ ಪಂಥಗಳಿಲ್ಲದ ಗ್ರಂಥಕ್ಕೆ ಅಂಟಿಕೊಳ್ಳದ
ಜನರ ಹೃದಯ ಗ್ರಂಥಿಗಳಲ್ಲಿ ಉಳಿದ
ಸಂತ- ವಸಂತ ಸಿದ್ಧೇಶ್ವರ ಅಪ್ಪಾಜಿಯವರು.
ಅವರು ಸುಳಿದೆಡೆಯಲ್ಲಿ ಸುಯಿಧಾನ- ಸಮಾಧಾನಗಳು
ನಿಂತ ನಿಲುವು ಸದಾ ಸತ್ಯದ ನಿಲುವು
ಮಾಯ ಮುಟ್ಟದ ಕಾಯ ಭ್ರಮೆಯಿಲ್ಲದ ಭಾವ
ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು
ಚಿಂತೆಗಳ ಮಧ್ಯ ನಿಶ್ಚಿಂತವಾಗಿ ಬದುಕುವ ಜೀವನ್ಮುಕ್ತಾವಸ್ಥರು