ಬೆಂಗಳೂರಿನಲ್ಲಿರುವ ಮುಕ್ತಿನಾಗ ಕ್ಷೇತ್ರದ ಮಹಿಮೆ ಕೇಳಿದ್ದೀರಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭವ್ಯವಾದ ಮುಕ್ತಿನಾಗ ದೇವಾಲಯವಿದೆ. ಕೆಂಗೇರಿ ದಾಟಿ ಬಲಕ್ಕೆ ತಿರುಗಿದರೆ ಸಿಗುವ ರಾಮೋಹಳ್ಳಿ ಬಳಿಯ ಮುಕ್ತಿನಾಗ ಕ್ಷೇತ್ರ, ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ. ಈ ದೇವಾಲಯ ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿ ಗರ್ಭ ಗೃಹವೆಂಬ ರಚನೆ ಇರದೆ ವಿಶಾಲವಾದ ಮುಖ ಮಂಟಪ ನಿರ್ಮಿಸಿ ಅದರಲ್ಲಿ ಎತ್ತರವಾದ ಅಧಿಷ್ಠಾನವುಳ್ಳ ವೇದಿಕೆ ರಚಿಸಲಾಗಿದೆ. ವೇದಿಕೆಯ ಮೇಲೆ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ.
ನಾಗ ದೇವರಿಗೆ ಸಂಬಂಧಪಟ್ಟಎಲ್ಲ ಪೂಜಾ ಕೈಂಕರ್ಯ ಇಲ್ಲಿ ನಡೆಯುತ್ತದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ವಿಜಯಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಎಂಬುವರು ಈ ಕ್ಷೇತ್ರವನ್ನು 1999ರಲ್ಲಿ ಸ್ಥಾಪಿಸಿದರು. ಅಲ್ಲಿಂದ ಇಲ್ಲಿಯವರೆಗೆ ಕ್ಷೇತ್ರದ ಮಹಿಮೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ 16 ಅಡಿಯ ಏಳು ಹೆಡೆಯುಳ್ಳ ನಾಗಮೂರ್ತಿ.
ಗೌರಿ ಸುಬ್ರಹ್ಮಣ್ಯ ಹೊತ್ತುಕೊಂಡಿದ್ದು, ಮುಕ್ತಿನಾಗ ದೇವಸ್ಥಾನವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಜ್ಯೇಷ್ಠ ಮಾಸದ ಶುದ್ಧ ತ್ರಯೋದಶಿಯಲ್ಲಿ ಬ್ರಹ್ಮರಥೋತ್ಸವ ಹಾಗೂ ಪ್ರತಿ ಮಾಘ ಮಾಸದ ಶುದ್ಧ ಷಷ್ಠಿಯಲ್ಲಿ ರಥೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
9 ಮಂಗಳವಾರ ಅಥವಾ 9 ಭಾನುವಾರ ಭಕ್ತರು ಇಲ್ಲಿಗೆ ಬಂದು 9 ಪ್ರದಕ್ಷಿಣೆ ಹಾಕಿದರೆ ಮನೋಸಂಕಲ್ಪಗಳು ಈಡೇರುತ್ತವೆ, ರೋಗ ರುಜಿನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಸರ್ಪಸಂಸ್ಕಾರ, ಕಾಳಸರ್ಪ ಶಾಂತಿ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ನಾಗಬಲಿ, ಕುಜ ಮತ್ತು ಶನಿ ಶಾಂತಿ, ನಾಗದೋಷ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇಲ್ಲಿ ಪರಿಹರಿಸಲಾಗುತ್ತದೆ.
ಸುಬ್ರಹ್ಮಣ್ಯಶಾಸ್ತ್ರಿ ಅವರಿಗೆ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವ ನಾಗರೂಪದ ಸುಬ್ರಹ್ಮಣ್ಯಸ್ವಾಮಿ ದೇವರು ದೇಗುಲ ಸ್ಥಾಪಿಸುವಂತೆ ಸೂಚಿಸಿದ್ದರು. ನಮ್ಮ ಮನೆಗೆ ಒಮ್ಮೆ ನಾಗಭೂಷಣ ಎಂಬುವರು ಬಂದು ತಮ್ಮ ಜಮೀನಿಗೆ ಕರೆದೊಯ್ದಿದ್ದರು.
ಅಲ್ಲಿ 16 ಅಡಿಗೂ ಹೆಚ್ಚು ಉದ್ದದ ಹಾವು ಹೆಡೆ ಬಿಚ್ಚಿ ನಿಂತಿತ್ತು. ಅದೇ ದಿನ ಮತ್ತೆ ಕನಸಿನಲ್ಲಿ ಬಂದ ನಾಗ ಇಂದು ನನ್ನನ್ನು ನೀನು ನೋಡಿದ ಜಾಗದಲ್ಲೇ ದೇಗುಲ ಸ್ಥಾಪಿಸು ಎಂದು ಸೂಚಿಸಿತು. ಶಾಸ್ತ್ರಿಗಳು ನಾಗಭೂಷಣ ಅವರ ಆ ಜಮೀನು ಖರೀದಿಸಿ ಅಲ್ಲಿ ದೇಗುಲ ಸ್ಥಾಪಿಸಿದರು. ಅದೇ ಈ ಮುಕ್ತಿನಾಗ ಕ್ಷೇತ್ರ.
ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟುಪ್ರಭಾವವನ್ನು ಬೀರುತ್ತವೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ, ಶಾಂತಿಗಳನ್ನು ಮಾಡುತ್ತಾರೆ.
ಪವಾಡ: ಮುಕ್ತಿನಾಗನ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ಪರ್ಸ್ ಕಳೆದುಕೊಂಡಿದ್ದರು. ಮಾರನೆ ದಿನ ಮತ್ತೆ ದೇವಾಲಯಕ್ಕೆ ಬಂದ ಮಹಿಳೆ, ಪರ್ಸ್ ಕಳೆದುಕೊಂಡ ಬಗ್ಗೆ ಅಲ್ಲಿನ ನೌಕರರಲ್ಲಿ ಹೇಳಿಕೊಂಡರು. ಎಲ್ಲರೂ ಸೇರಿ ಹುಡುಕಿದಾಗ ಪರ್ಸ್ ಕಣ್ಣಿಗೆ ಬಿತ್ತು. ಆದರೆ, ಪರ್ಸ್ ಸುತ್ತುವರಿದು ನಾಗ ಕುಳಿತುಬಿಟ್ಟಿದ್ದ! ಎಲ್ಲರಿಗೂ ಅಚ್ಚರಿ. ಅಷ್ಟಕ್ಕೂ ಆ ಪರ್ಸ್‌ನಲ್ಲಿದ್ದದ್ದು ಕೇವಲ 2500 ರುಪಾಯಿ.
ಪವಾಡ : 20 ವರ್ಷದ ಕಾಲೇಜು ಯುವಕ. ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ವೈದ್ಯರು ಕೈಚೆಲ್ಲಿದ್ದರು. ದಾರಿ ಕಾಣದೆ ಕಂಗಾಲಾದ ತಾಯಿ ಮೊರೆ ಹೋಗಿದ್ದು ಇದೇ ಮುಕ್ತಿನಾಗನಿಗೆ. ಮುಕ್ತಿನಾಗನನ್ನು ಪ್ರಾರ್ಥಿಸಿ ಗೌರಿ ಅಮ್ಮ ಯುವಕನಿಗೆ ಔಷಧಿ ಕೊಟ್ಟರು. 15 ದಿನಗಳ ಬಳಿಕ ಕ್ಯಾನ್ಸರ್ ಗಡ್ಡೆಯೇ ಕರಗಿಹೋಗಿತ್ತು! ಮತ್ತೆ ಮೂರು ತಿಂಗಳ ಔಷಧ ತೆಗೆದುಕೊಂಡ ಯುವಕ, ಕ್ಯಾನ್ಸರ್‌ನಿಂದ ಸಂಪೂರ್ಣ ಮುಕ್ತನಾಗಿದ್ದ. ಚಿಕಿತ್ಸೆ ಕೊಡುತ್ತಿದ್ದ ವೈದ್ಯರಿಗೇ ಮಾತೇ ಹೊರಡದಂತಹ ಸ್ಥಿತಿ.