Ram Mandir: ಪರಶುರಾಮನ ನಾಡಿನಿಂದ ಶ್ರೀರಾಮನ ಅಯೋಧ್ಯೆ ತಲುಪಿದ ನಾಗಪುಷ್ಪ
ಅಯೋಧ್ಯೆಯ ಶ್ರೀರಾಮ ಮಂದಿರ ಕೋಟಿ ಕೋಟಿ ಹಿಂದುಗಳ ಕನಸು. ರಾಮನಿಗೆ ಭವ್ಯ ಮಂದಿರ ನಿರ್ಮಾಣ ವಾಗುತ್ತಿದೆ.ಮುಂದಿನ ವರ್ಷ ಲೋಕಾರ್ಪಣೆ ಗೊಳ್ಳಲಿದೆ. ಈ ನಡುವೆ ರಾಮನ ಮಂದಿರದ ಮೆರುಗು ಹೆಚ್ಚಿಸಲು ಮಂಗಳೂರಿನ ಯುವಕನೊಬ್ಬ ಬೆಳೆದ ನಾಗಲಿಂಗ ಪುಷ್ಪದ ಗಿಡ ಅಯೋಧ್ಯೆ ತಲುಪಿದ್ದು, ಶ್ರೀರಾಮ ಚಂದ್ರನ ಭವ್ಯ ಮಂದಿರದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ.
ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, ದೇಶದ ಹಲವು ಭಾಗಗಳಿಂದ ಅನೇಕ ರೀತಿಯ ವಸ್ತುಗಳು ಅಯೋಧ್ಯೆಯ ಪುಣ್ಯ ಭೂಮಿಯನ್ನ ತಲುಪಿದೆ. ಈ ನಡುವೆ ಇದೇ ಮೊದಲ ಬಾರಿಗೆ ದ.ಕ ಜಿಲ್ಲೆಯಿಂದ ನಾಗಲಿಂಗ ಪುಷ್ಪ ಎನ್ನುವ ಗಿಡವೊಂದು ಅಯೋಧ್ಯೆಯ ಪುಣ್ಯ ಭೂಮಿಯನ್ನು ತಲುಪಿದ್ದು, ಶ್ರೀರಾಮನ ಮಂದಿರದ ಎದುರು ಅಲಂಕಾರಕ್ಕಾಗಿ ನೆಡಲು ರಾಮ ಜನ್ಮಭೂಮಿ ಟ್ರಸ್ಟ್ ಆಡಳಿತ ಸಿದ್ದತೆ ನಡೆಸಿದೆ.
ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಗ್ರಾಮದ ವಿನೇಶ್ ಪೂಜಾರಿ ಎಂಬವರು ತಾವು ಬೆಳೆದ ನಾಗಲಿಂಗ ಪುಷ್ಪದ ಗಿಡವನ್ನು ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಮೊದಲೇ ಇವರಿಗೆ ನಾಗಲಿಂಗ ಪುಷ್ಟದ ಗಿಡವನ್ನು ಅಯೋಧ್ಯೆಗೆ ಕಳುಹಿಸುವ ಉದ್ದೇಶವಿದ್ದು, ಅದರಂತೆ ಗೂಗಲ್ ಮೂಲಕ ಅಯೋಧ್ಯೆಯೆ ನಂಬರ್ ಪಡೆದು ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿ ಗಿಡಗಳನ್ನು ಕಳುಹಿಸಿ ಕೊಡುವಂತೆ ಸೂಚಿಸಿದೆ.
ಸೆ. 5 ರಂದು 5 ಗಿಡಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಇದಾಗಿ ಕೆಲವು ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದ್ದು, ಗಿಡ ಸಿಕ್ಕಿದ್ದು ಗಿಡವನ್ನು ಆಯೋಧ್ಯೆಯ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ಹಾಗೂ ಬಳಿಕ ಚಿತ್ರವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.
ನಾಗಲಿಂಗ ವೃಕ್ಷ ಎಂದರೆ ನಾಗಲಿಂಗಾಕಾರದ ಹೂ ಬಿಡುವ ವಿಶಿಷ್ಟ ವೃಕ್ಷ. ಇದು ದೊಡ್ಡ ಮರವಾಗಿ ಬೆಳೆಯುತ್ತದೆ. ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ ನಾಗಲಿಂಗ ಪುಷ್ಪವನ್ನು ಮಲ್ಲಿಕಾರ್ಜುನ ಪುಷ್ಪ ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ
ಇದರ ಕಾಯಿಯನ್ನು ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ. ದೊಡ್ಡ ಮರವಾಗಿ ಬೆಳೆಯುವ ಈ ವೃಕ್ಷ ಅತ್ಯಂತ ಗಟ್ಟಿಯಾಗಿರುವ ಕಾರಣ, ಕ್ರಿಕೆಟ್ ಬ್ಯಾಟ್ ತಯಾರಿಯಲ್ಲೂ ಈ ಮರವನ್ನು ಬಳಸುತ್ತಾರೆ. ಇದರ ಬೀಜ ಫಿರಂಗಿಯ ಗುಂಡನ್ನು ಹೋಲುತ್ತದೆ. ನಾಗರ ಹೆಡೆಯಲ್ಲಿ ಲಿಂಗ ಇರುವ ರೀತಿಯ ಹೂ ಬೀಡುವ ಮರವಿದು. ನೆಟ್ಟ ಬಳಿಕ 4 ವರ್ಷಗಳ ನಂತರ ಹೂ ಬಿಡುತ್ತದೆ. ಈ ಗಿಡ ಔಷಧೀಯ ಗುಣವನ್ನೂ ಹೊಂದಿದ್ದು, ಚರ್ಮರೋಗ ಮತ್ತಿತರ ಕಾಯಿಲೆಗಳಿಗೆ ಕಷಾಯವಾಗಿ ಬಳಕೆಯಾಗುತ್ತೆ.