Sex Education: ಬೇಕಾ? ಯಾರಿಗೆ? ಯಾವಾಗ?
ಈಗಷ್ಟೇ ತೊದಲು ಮಾತು ಆಡಲು ಕಲಿತ ಮಗು, ಅಮ್ಮಾ ನಾನು ಎಲ್ಲಿಂದ ಬಂದೆ, ಎಂದು ಪ್ರಶ್ನಿಸಿದಾಗಲೇ ಮಗುವಿನಲ್ಲಿ ಕಾಣದ ಕುತೂಹಲ ಹುಟ್ಟಿಕೊಂಡಿದೆ ಎಂದರ್ಥ. 'ದೇವರ ಹತ್ತಿರ ಬೇಡಿಕೊಂಡ್ವಿ, ಹೊಟ್ಟೆಯಿಂದ ಹೊರಗೆ ನೀನು ಬಂದಿ, ಆಸ್ಪತ್ರೆಯಿಂದ ತೆಗೆದುಕೊಂಡು ಬಂದೆವು..' ಎಂದು ಹೇಳಿದಾಗ ಆ ಕ್ಷಣದಲ್ಲಿ ಮಗು ಸಮಾಧಾನಗೊಂಡರೂ, ಬುದ್ಧಿ ಬೆಳೆಯುತ್ತಿದ್ದಂತೆ ಲೈಂಗಿಕತೆ ಬಗ್ಗೆ ಮಗುವಿನ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಈ ಬಗ್ಗೆ ಅಗತ್ಯ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿಯಾದರೂ, ಮಡಿವಂತಿಕೆಯ ಕುಟುಂಬಗಳು ಹಾಗೂ ಸಮಾಜ ಈ ವಿಷಯದ ಬಗ್ಗೆ ಮಾತನಾಡದಂತೆ ಮಾಡಿ ಬಿಡುತ್ತದೆ. ಆದರೆ, ಈ ಜ್ಞಾನವನ್ನು ವಯಸ್ಸಿಗೆ ಅನುಗಣವಾಗಿ, ವೈಜ್ಞಾನಿಕವಾಗಿ ಹೇಳಿ ಕೊಡುವುದನ್ನೇ ಲೈಂಗಿಕ ಶಿಕ್ಷಣ ಎನ್ನುತ್ತಾರೆ. ಇಲ್ಲಿ ದೇಹ, ಅಂಗಾಂಗಳ ಬೆಳವಣಿಗೆ...ಇಂಥ ವಿಷಯಗಳ ಬಗ್ಗೆ ಕಲಿಸಲಾಗುತ್ತದೆಯೇ ಹೊರತು ಲೈಂಗಿಕ ಕ್ರಿಯೆ ಬಗ್ಗೆಯಲ್ಲ. ಅಷ್ಟಕ್ಕೂ ಲೈಂಗಿಕ ಶಿಕ್ಷಣವೆಂದರೇನು, ಇದರ ಅಗತ್ಯವಿದೆಯೇ?
ದೇಹದ ಅಂಗರಚನೆ, ಶರೀರ ಶಾಸ್ತ್ರ, ಮನುಷ್ಯನ ಸಂತಾನೋತ್ಪತ್ತಿ ವ್ಯವಸ್ಥೆ, ಗರ್ಭ ಧಾರಣೆ, ಸಂತಾನ ನಿಯಂತ್ರಣ, ಮನೋ ಲೈಂಗಿಕತೆ, ಲೈಂಗಿಕ ನಡೆಗೆ ಸಂಬಂಧಿಸಿದ ಪ್ರೀತಿ, ಪ್ರೇಮ ಅಂದರೆ ಕ್ರಷ್...ಈ ಎಲ್ಲ ಬಗ್ಗೆಯೂ ನೀಡುವ ವೈಜ್ಞಾನಿಕ ಶಿಕ್ಷಣವೇ ಲೈಂಗಿಕ ಶಿಕ್ಷಣ.
ಲೈಂಗಿಕತೆ ಹಾಗೂ ದೇಹದ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೇ ವಿಶ್ವಾಸ ಬೆಳೆಯಿಸಿಕೊಳ್ಳುವಂಥ ವ್ಯಕ್ತಿತ್ವ ವಿಕಸನ ಪಾಠವೂ ಈ ಸೆಕ್ಸ್ ಎಜುಕೇಷನ್‌ನ ಒಂದು ಭಾಗ. ಮನದಲ್ಲಿ ಹುಟ್ಟಿ ಕೊಳ್ಳುವ ವಯೋ ಸಹಜ ಲೈಂಗಿಕ ವಾಂಛೆ ಹಾಗೂ ಪ್ರವೃತ್ತಿ ಬಗ್ಗೆ ವಯಸ್ಸಿಗೆ ಅನುಗುಣವಾಗಿ ಅರಿವು ಮೂಡಿಸಲಾಗುತ್ತದೆ.
ದೇಹದ ಬೆಳವಣಿಗೆ, ಮಾನಸಿಕ ಬದಲಾವಣೆಯಿಂದ ಭಯ ಪಡದೇ, ಜೀವನದಲ್ಲಿ ಬಂದದ್ದನ್ನು ಖುಷಿಯಿಂದ ಸ್ವೀಕರಿಸುವುದಕ್ಕೂ ವಯಸ್ಸಿಗೆ ತಕ್ಕಂತೆ ಮಕ್ಕಳನ್ನು ಸನ್ನದ್ಧಗೊಳಿಸಲಾಗುತ್ತದೆ.
ಅದೂ ಅಲ್ಲದೇ ಪರಿಸ್ಥಿತಿ ಬದಲಾದಂತೆ ಇಂದಿನ ಯುವಕ, ಯುವತಿಯರು ತಮ್ಮ ಉದ್ಯೋಗದಲ್ಲಿ ಸಂಪೂರ್ಣ ಸೆಟಲ್ ಆಗೋ ತನಕ ಮದುವೆ ಮುಂದೂಡುತ್ತಾರೆ. ಆದರೆ, ಹವಾಮಾನದಲ್ಲಾಗುತ್ತಿರುವ ವಿಪರೀತ ಬದಲಾವಣೆಗಳಿಂದ ಗಂಡು ಅಥವಾ ಹೆಣ್ಣು ಮಕ್ಕಳಾಗಲಿ ದೈಹಿಕವಾಗಿ ಪ್ರಬುದ್ಧತೆಗೆ ಕಾಲಿಡುವುದು ಬಹಳ ಬೇಗ. ವಯಸ್ಸಿಗನುಗುಣವಾಗಿ ಲೈಂಗಿಕ ವಾಂಛೆಗಳು ಇದ್ದೇ ಇರುತ್ತವೆ. ಕುತೂಹಲದಿಂದ ದಾರಿ ತಪ್ಪದಂತೆ ಶಿಕ್ಷಣ ನೀಡುವುದು ಇಂದಿನ ತುರ್ತು.
ಅಷ್ಟೇ ಅಲ್ಲ ವಯಸ್ಸಿಗನುಗುಣವಾಗಿ ದೈಹಕ ಬೆಳವಣಿಗೆಯಾಗುವ ಸಮಯದಲ್ಲಿ ಅಗತ್ಯ ಪೋಷಕಾಂಶಗಳು ಮನುಷ್ಯನ ದೇಹ ಸೇರಬೇಕು. ಆ ಮೂಲಕ ಮನುಷ್ಯನ ಲೈಂಗಿಕ ಜೀವನವನ್ನು ಕೆಲವು ಕಾಲಗಳ ವಿಸ್ತರಿಸಬಹುದಾಗಿದೆ.
ಸಾಮಾಜಿಕ ಪರಿಸರ, ಸಂಪ್ರದಾಯಗಳು ಲೈಂಗಿಕತೆ ಬಗ್ಗೆ ಕೆಟ್ಟ ಕುತೂಹಲ ಮೂಡಿಸುತ್ತದೆಯೇ ಹೊರತು, ಅಗತ್ಯ ಅರಿವು ಮೂಡಿಸುವುದಿಲ್ಲ. ಸಾಮಾಜಿಕ ಕಟ್ಟುಪಾಡುಗಳು ಹಾಗೂ ಲೈಂಗಿಕ ವಾಂಛೆಯಿಂದ ಯುವಕ, ಯುವತಿಯರು ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಾರೆ. ಇದು ಬಹಳಷ್ಟು ಸಾರಿ ತಪ್ಪು ದಾರಿಗೆ ಎಳೆಯುವುದೇ ಹೆಚ್ಚು.
ಕೆಟ್ಟ ಕೂತಹಲಗಳಿಂದ ಬೇಡದ ಗರ್ಭ ಧಾರಣೆ, ಲೈಂಗಿಕ ಅಪರಾಧ ಚಟುವಟಿಕೆಗಳು, ಲೈಂಗಿಕ ರೋಗಗಳನ್ನು ಅಂಟಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಪರಿಸ್ಥಿತಿ ಬಿಗಡಾಯಿಸಿ, ಜೀವನವೇ ಬರ್ಬರವಾಗುವುದು ಸುಳ್ಳಲ್ಲ.
ಲೈಂಗಿಕ ಅಜ್ಞಾನವೊಂದು ಸಾಮಾಜಿಕ ಪಿಡುಗಾಗಿದ್ದು, ಲೈಂಗಿಕತೆ ಬಗೆಗಿನ ತಪ್ಪು ಕಲ್ಪನೆಗಳು ಸಾಮಾಜಿಕ ಸ್ವಾಸ್ಥ್ಯವನ್ನೇ ಹದಗೆಡುವಂತೆ ಮಾಡುತ್ತಿದೆ.
ಇಂಥದ್ದೊಂದು ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೆ ಲೈಂಗಿಕ ಶಿಕ್ಷಣವೊಂದೇ ಪರಿಹಾರ ಎಂಬುವುದು ತಜ್ಞರ ಅಭಿಪ್ರಾಯ. ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಅವರ ದೇಹದ ಬೆಳವಣಿಗೆ, ಮಾನಸಿಕ ಗೊಂದಲಗಳ ಬಗ್ಗೆ ಇಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.
ಆರೋಗ್ಯ ಕಾರ್ಯಕ್ರಮಗಳೊಂದಿಗೆ ಈ ಶಿಕ್ಷಣವನ್ನೂ ನೀಡಿದಲ್ಲಿ, ಮಕ್ಕಳಲ್ಲಿ ಹುಟ್ಟಬಹುದಾದ ಕೆಟ್ಟ ಕುತೂಹಲಗಳಿಗೆ ಬ್ರೇಕ್ ಹಾಕಿ, ಮಾನಸಿಕ ಸ್ವಾಸ್ಥ್ಯ ಕಾಪಾಡಲು ಅನುವು ಮಾಡಿ ಕೊಡುತ್ತದೆ. ಇದರಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಹೆಚ್ಚಾಗಿದ್ದು, ಜೊತೆಯಾಗಿ ಮಕ್ಕಳಲ್ಲಿ ಅಗತ್ಯವಿರುವ ಅರಿವು ಮೂಡಿಸಬೇಕಾಗಿದೆ.