ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆ!
ಪ್ರತಿ ವರ್ಷ ಜುಲೈ 1ನ್ನು ರಾಷ್ಟ್ರೀಯ ವೈದ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಇಡೀ ವಿಶ್ವವೇ ಕೊರೋನಾ ಎಂಬ ಸಂಕಟವನ್ನೆದುರಿಸುತ್ತಿರುವಾಗ, ಈ ವೈದ್ಯರ ದಿನ ಅತ್ಯಂತ ವಿಶೇಷವಾಗಿದೆ. ಯಾಕೆಂದರೆ ಕೊರೋನಾ ಕಾಲದಲ್ಲಿ ಸೋಂಕಿತರ ಪ್ರಾಣ ಕಾಪಾಡಲು ವೈದ್ಯರು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ಇದೇ ದಿನ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಶಾಕಿಂಗ್ ಘಟನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಇಲ್ಲೊಂದು ವೈದ್ಯ ದಂಪತಿ ಡಾಕ್ಟರ್ಸ್ ಡೇಯಂದೇ ತಮ್ಮ ಜೀವನ ಕೊನೆಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಂಪತಿಯ ಸ್ನೇಹಿತರು ಅವರ ಫೋಟೋ ಶೇರ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಈ ಘಟನೆ ನಡೆದಿದ್ದು ಪುಣೆಯ ವನವಾಣಿ ಠಾಣಾ ವ್ಯಾಪ್ತಿಯಲ್ಲಿ. ಇನ್ನು ಆತ್ಮಹತ್ಯೆಗೆ ಶರಣಾದ ವೈದ್ಯ ದಂಪತಿ ಅಂಕಿತಾ ನಿಖಿಲ್ ಶೇಂಡ್ಕರ್(26) ಹಾಗೂ ನಿಖಿಲ್ ದತ್ತಾತ್ರೇಯ ಶೇಂಡ್ಕರ್(28) ಎಂದು ಗುರುತಿಸಲಾಘಿದೆ. ಇಬ್ಬರೂ ಬೇರೆ ಬೇರೆ ಕಡೆ ಪ್ರ್ಯಾಕ್ಟೀಸ್ ಮಾಡುತ್ತಿದ್ದರೆನ್ನಲಾಗಿದೆ. ಅಂಕಿತಾರ ಕ್ಲಿನಿಕ್ ಆಜಾದ್ ನಗರದಲ್ಲಿದ್ದರೆ, ನಿಖಿಲ್ ಬೇರೊಂದು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಬುಧವಾರ ರಾತ್ರಿ ಇಬ್ಬರೂ ಡ್ಯೂಟಿ ಮುಗಿಸಿ ಮನೆಗೆ ಮರಳುವಾಗ ಫೋನ್‌ನಲ್ಲಿ ಮಾತನಾಡಿ ಜಗಳವಾಡಿಕೊಂಡಿದ್ದಾರೆ. ಇದಾದ ಬಳಿಕ ನಿಖಿಲ್ ತಡರಾತ್ರಿ ಮನೆಗೆ ತಲುಪಿದಾಗ ಅಂಕಿತಾ ನೇಣಿಗೆ ಶರಣಾಗಿದ್ದಳು.
ನಿಖಿಲ್ ಕೂಡಲೇ ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಮನೆಗೆ ಕರೆಸಿಕೊಂಡಿದ್ದಾನೆ. ಅಲ್ಲದೇ ಅಂಕಿತಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಬಳಿಕ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತ್ನಿಯ ನಿಧನದ ಸುದ್ದಿ ಸಹಿಸಿಕೊಳ್ಳಲಾಗದ ನಿಖಿನ್ ಮನೆಗೆ ತಲುಪಿ ತಾನೂ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಅಂಕಿತಾ ಹಾಗೂ ನಿಖಿಲ್ ಈ ವರ್ಷದಲ್ಲೇ ಮದುವೆಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಕುಟುಂಬಸ್ಥರ ಅನುಮತಿ ಪಡೆದುಕೊಂಡೇ ಮದುವೆಯಾಗಿದ್ದರು. ಆದರೆ ಕೆಲ ದಿನಗಳಿಂದ ಯಾವುದೋ ವಿಚಾರವಾಗಿ ಇಬ್ಬರ ನಡುವೆ ಮಕಚ್ಚಾಟ ಆರಂಭವಾಗಿತ್ತು. ಈ ಜಗಳ ನೋಡ ನೋಡುತ್ತಿದ್ದಂತೇ ಹೆಚ್ಚಾಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.