ಇವರೇ ನೋಡಿ ಬೆಂಗಳೂರಿನ ಮಹಾನ್ ಕಳ್ಳರು; ಒಬ್ಬೊಬ್ಬರದ್ದೂ ಒಂದೊಂದು ನಂಬಿಕೆ ದ್ರೋಹದ ಕಥೆ!
ಬೆಂಗಳೂರಿನಲ್ಲಿ ಮನೆಕೆಲಸದವರು, ನೌಕರರು ಮನೆ ಮಾಲೀಕರ ನಂಬಿಕೆಗೆ ದುರುಪಯೋಗಪಡಿಸಿಕೊಂಡು ಕಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧಿತವಾಗಿರುವ 3 ಮಹಿಳೆಯರು ಇಬ್ರು ಪುರುಷರದ್ದು ಒಬ್ಬೊಬ್ಬರದ್ದೂ ಒಂದೊಂದು ನಂಬಿಕೆ ದ್ರೋಹದ ಕಥೆಯಿದೆ.

113 ಗ್ರಾಂ ಚಿನ್ನ ಕದ್ದ ಮನೆ ಕೆಲಸದ ಕಳ್ಳಿ
ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮಹಿಳೆ ಬಂಧನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು: ನಂಬಿಕೆಗೆ ಧಕ್ಕೆ ತರುವ ಘಟನೆ ಮತ್ತೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೆಲಸ ಕೊಟ್ಟ ಮನೆಯಲ್ಲಿಯೇ ಕನ್ನ ಹಾಕಿದ ಮಹಿಳಾ ಆರೋಪಿ ಶಾಲಿನಿ (30) ಎಂಬಾಕೆಯನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಚಿತ್ರದುರ್ಗ ಮೂಲದವಳಾಗಿದ್ದು, ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ವಾಸವಿದ್ದರು. ಆರೋಪಿ ಶಾಲಿನಿ, ಅಕ್ಷಯ್ ಕೃಷ್ಣ ಎಂಬುವವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದರು. ವಯಸ್ಕರೊಬ್ಬರ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊತ್ತಿದ್ದ ಈಕೆ, ಮಾಲೀಕರು ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿದ್ದ 113 ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದರು.
ಕಳೆದ ಕೆಲವು ದಿನಗಳಿಂದ ಮನೆಯಲ್ಲಿರುವ ಚಿನ್ನಾಭರಣ ಕಾಣೆಯಾಗಿದ್ದು, ಇದರಿಂದ ಆತಂಕಗೊಂಡ ಮನೆ ಮಾಲೀಕರು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಶಾಲಿನಿ ಮೇಲೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ, ಅವಳು ಕಳ್ಳತನದ ವಿಷಯವನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿ ಶಾಲಿನಿಯಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
₹8 ಲಕ್ಷ ಕ್ಯಾಶ್, 40 ಗ್ರಾಂ ಚಿನ್ನ ಕದ್ದ ಕಳ್ಳಿ
ಇಟ್ಮಡುವಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮನೆಯಲ್ಲೇ ಕಳ್ಳತನ: ₹8.47 ಲಕ್ಷ ಮೌಲ್ಯದ ನಗದು ವಶ
ಬೆಂಗಳೂರು : ಮನೆ ಕೆಲಸದ ಹೆಸರಿನಲ್ಲಿ ನಂಬಿಕೆಗೆ ಧಕ್ಕೆ ತರುವಂತೆ ನಡೆದುಕೊಂಡ ಮಹಿಳೆ ಭಾರೀ ಕಳ್ಳತನ ನಡೆಸಿದ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಕಮಲಾ (35) ಎಂಬಾತಿಯನ್ನು ಬಂಧಿಸಿ ₹8.47 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಹಿತಿ ಪ್ರಕಾರ, ಕಮಲಾ ಇಟ್ಟಮಡುವಿನ ಮನೆಯೊಂದರಲ್ಲಿ ಸುಮಾರು ಮೂರು ತಿಂಗಳ ಹಿಂದೆ ಮನೆ ಕೆಲಸಕ್ಕೆ ಸೇರಿದ್ದಳು. ಈ ಮನೆ ಮಾಲೀಕರು ತಮ್ಮ ಮನೆಯಲ್ಲಿ ರಿನೋವೇಷನ್ ಕೆಲಸ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮನೆಯ ಸಾಮಗ್ರಿ ಬಗ್ಗೆ ಗಮನವಿಲ್ಲದ ವೇಳೆ ₹3.85 ಲಕ್ಷ ನಗದು ಮತ್ತು 48 ಗ್ರಾಂ ತೂಕದ ಚಿನ್ನಾಭರಣವನ್ನು ಕದ್ದಿದ್ದಾಳೆ. ಮನೆಯಲ್ಲಿ ಕಳ್ಳತನ ನಡೆದ ನಂತರ ಮಾಲೀಕರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ತೀವ್ರ ವಿಚಾರಣೆ ಬಳಿಕ ಕಮಲಾಳ ಶಂಕಿತ ಚಟುವಟಿಕೆ ಪತ್ತೆಯಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯಕೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿ ಮಹಿಳೆಯಿಂದ ಕಳವಾದ ಒಟ್ಟು ₹8.47 ಲಕ್ಷ ಮೌಲ್ಯದ ಹಣ ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮನೆಗೆ ಡೂಬ್ಲಿಕೇಟ್ ಕೀ ಮಾಡಿಸಿ 128 ಗ್ರಾಂ ಚಿನ್ನ ಕದ್ದ ಕಳ್ಳಿ
ಕೆಲಸ ಮಾಡುತ್ತಿದ್ದ ಮನೆಯನ್ನೇ ದೋಚಿದ ಮಹಿಳಾ ಕಳ್ಳಿ; ₹12 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು: ಕೆಲಸ ಕೊಟ್ಟ ಮನೆಯಲ್ಲಿಯೇ ಕನ್ನ ಹಾಕಿ ಪರಾರಿಯಾಗಿದ್ದ ಮಹಿಳಾ ಕಳ್ಳಿಯನ್ನು ಹೆಚ್ ಎ ಎಲ್ ಪೊಲೀಸ್ ಠಾಣೆಯ ಪೊಲೀಸರು ನಾಟಕೀಯವಾಗಿ ಬಂಧಿಸಿದ್ದಾರೆ. ಬಂಧಿತ ಮಹಿಳೆ ವರಲಕ್ಷ್ಮೀ ಮನೆ ಕೆಲಸದ ವೇಳೆ ಕಳ್ಳತನ ಮಾಡಿ ಶ್ರೀಮಂತೆಯಾಗುವ ಕನಸು ಕಂಡಿದ್ದಳು. ಪೊಲೀಸರ ಪ್ರಕಾರ, ವರಲಕ್ಷ್ಮೀ ಕಳೆದ 2 ತಿಂಗಳಿಂದ ವಿಭೂತಿಪುರದ ಮನೆಯೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದ ಆರೋಪಿಗೆ, ಕಳ್ಳತನ ಮಾಡುವ ಯೋಚನೆ ಮೂಡಿತ್ತು.
ಚಾಲಾಕಿತನದಿಂದ ಮನೆಯ 2 ಕೀಗಳಲ್ಲಿ ಒಂದನ್ನು ಕದ್ದುಕೊಂಡು ಹೋಗಿದ್ದಳು. ಮನೆ ಮಾಲೀಕರು ಕೀ ಮನೆಯಲ್ಲಿ ಎಲ್ಲಿಯೋ ಕಳೆದು ಹೋಗಿದೆ ಎಂದು ಸುಮ್ಮನಾಗಿದ್ದರು. ಆದರೆ, ಕೆಲಸಕ್ಕಿದ್ದ ಮಹಿಳೆ, ಮನೆಯ ಮಾಲೀಕರು ಊರಿಗೆ ಹೋಗಿದ್ದ ವೇಳೆ ಮನೆ ಬಾಗಿಲು ತೆರೆದು, ಬೀರುವಿನಲ್ಲಿ ಇಟ್ಟಿದ್ದ 128 ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದರು. ಮನೆಯ ಚಿನ್ನಾಭರಣ ನಾಪತ್ತೆಯಾದ ಬಳಿಕ ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ, ವರಲಕ್ಷ್ಮಿಯನ್ನು ಬಂಧಿಸಿ ₹12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕೆಲಸ ಮಾಡೋ ಜ್ಯೂವೆಲ್ಲರಿ ಶಾಪಿನ 3 ಕೆಜಿ ಬೆಳ್ಳಿ ಕದ್ದ ನೌಕರ
ಬೆಳ್ಳಿಯ ಆಭರಣ ಕಳವು ಮಾಡಿದ ನೌಕರ ಗೋಪಾಲ್ ನಾಯ್ಕ್ ಬಂಧನ; 3 ಕೆಜಿ ಬೆಳ್ಳಿ ವಶ
ಬೆಂಗಳೂರು: ಕೆಲಸ ಕೊಟ್ಟ ಮಾಲೀಕನ ನಂಬಿಕೆ ಧಕ್ಕೆ ತರುವ ಕೆಲಸವನ್ನು ಮಾಡಿ ಬರೋಬ್ಬರಿ 3 ಕೆಜಿ ಬೆಳ್ಳಿಯನ್ನು ಕದ್ದು ಪರಾರಿ ಆಗಿದ್ದ ಕಳ್ಳನನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಚಿತ್ರದುರ್ಗ ಜಿಲ್ಲೆ ಮೂಲದ ಗೋಪಾಲ್ ನಾಯ್ಕ್ (32) ಎಂಬಾತನಾಗಿದ್ದು, ಎಂಪಿ ಜ್ಯುವೆಲ್ಲರ್ಸ್ ಎಂಬ ಖ್ಯಾತ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಗೋಪಾಲ್ ನಾಯ್ಕ್‌ಗೆ ಅಂಗಡಿಯ ಬೆಳ್ಳಿ ವಸ್ತುಗಳನ್ನು ಪಾಲಿಶ್ ಮಾಡಲು ಹೊರಗೆ ಕೊಂಡೊಯ್ಯುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ಜವಾಬ್ದಾರಿಯನ್ನು ದುರ್ಬಳಕೆ ಮಾಡಿಕೊಂಡು, ಮಾಲೀಕರಿಗೆ ಯಾಮಾರಿಸಿ ಸುಮಾರು 3 ಕೆಜಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದನು.
ಅಂಗಡಿಯ ಮಾಲೀಕರು ಬೆಳ್ಳಿ ನಾಪತ್ತೆಯಾದ ವಿಷಯವನ್ನು ಗಮನಿಸಿ ತಕ್ಷಣವೇ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ದೂರು ಮೇರೆಗೆ ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಖಚಿತ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧನಕ್ಕೊಳಪಡಿಸಿದರು. ಬಂಧಿತನಿಂದ ₹3 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಜಿನಿಯರಿಂಗ್ ಮನೆಗಳ್ಳ; 90 ಕೇಸಿನ ಆರೋಪಿ ಲಾಕ್!
ಓದಿಕೊಂಡಿದ್ದು, ಇಂಜಿನಿಯರಿಂಗ್ ಮಾಡೋದು ಮನೆ ಕಳ್ಳತನ: ಒಂದೇ ದಿನ 3 ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದ
ಬೆಂಗಳೂರು: ಚಿನ್ನಾಭರಣ ಕಳ್ಳತನ ಮಾಡುವುದನ್ನೇ ಖಯಾಲಿ ಮಾಡಿಕೊಂಡಿದ್ದ ಆಂಧ್ರ ಪ್ರದೇಶದ ಕೆಂಪಲ್ಲಿ ಮೂಲದ ಶ್ರೀನಿವಾಸ್ (35) ಎಂಬಾತ, ಒಂದೇ ದಿನದಲ್ಲಿ ಕೊಡಿಗೆಹಳ್ಳಿ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈತನ ವಿರುದ್ಧ ಈಗಾಗಲೇ 90ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಕೇವಲ ಕಳ್ಳತನವಲ್ಲ, ಸೈಬರ್ ವಂಚನೆಗೂ ಈತನ ಕೈವಾಡವಿದೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಶ್ರೀನಿವಾಸ್, ಪದವಿ ಪೂರ್ಣಗೊಳಿಸಿದ ಬಳಿಕ ಒಂದು ಕಾಲದಲ್ಲಿ ಆಂಧ್ರದ ಸಿನೆಮಾ ಇಂಡಸ್ಟ್ರಿಯಲ್ಲಿ ಸೆಟ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, 2008 ರಲ್ಲಿ ಸೆಟ್‌ನಲ್ಲಿ ಲ್ಯಾಪ್ಟಾಪ್ ಕಳವು ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಜೈಲು ಸೇರಿದ್ದನು. ನಂತರದ ದಿನಗಳಲ್ಲಿ ಕಳ್ಳತನದ ಮಾರ್ಗವನ್ನೇ ಆತನ ಜೀವನಶೈಲಿ ಮಾಡಿಕೊಂಡಿದ್ದನು.
ಆನ್ಲೈನ್ ಗೇಮ್ ಹುಚ್ಚು ಈತನನ್ನು ತೀವ್ರ ಹಣದ ಬೇಡಿಕೆಗೆ ದೂಡಿದೆ. ಅದೆ ಕಾರಣದಿಂದ ಶ್ರೀನಿವಾಸ್ ವಿವಿಧ ರಾಜ್ಯಗಳಲ್ಲೂ ಕಳ್ಳತನಕ್ಕೆ ಇಳಿದಿದ್ದ. ಆಂಧ್ರಪ್ರದೇಶದಲ್ಲಿ ಈತನ ವಿರುದ್ಧ 87ಕ್ಕೂ ಹೆಚ್ಚು ಪ್ರಕರಣಗಳು, ಮತ್ತು ಕರ್ನಾಟಕದ ಧಾರವಾಡ, ಬೀದರ್, ಜೆ. ಬಿ. ನಗರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಇನ್ನೂ ನಾಲ್ಕು ಪ್ರಕರಣಗಳು ದಾಖಲಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ, ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ಲೇಔಟ್‌ನಲ್ಲಿ ಎರಡು ಮನೆಗಳು, ಮತ್ತು ಪಾರ್ವತಮ್ಮ ಲೇಔಟ್‌ನಲ್ಲಿ ಒಂದು ಮನೆಗಳ್ಳತನವಾಗಿದೆ. ಮನೆ ಮಾಲೀಕರು ಮನೆಯಲ್ಲಿ ಇಲ್ಲದಿರುವ ಸಮಯವನ್ನು ಬಳಸಿಕೊಂಡು, ಶ್ರೀನಿವಾಸ್ ಮನೆಯಲ್ಲಿ ಬೀಗ ಮುರಿದು ನುಗ್ಗಿ ಚಿನ್ನಾಭರಣ ದೋಚಿದ್ದ. ಪೊಲೀಸರು ತನಿಖೆ ನಡೆಸಿ ಮೈಸೂರಿನಲ್ಲಿ ಖಾಸಗಿ ಪಿಜಿಯೊಂದರಲ್ಲಿ ತಂಗಿದ್ದ ಶ್ರೀನಿವಾಸನನ್ನು ಬಂಧಿಸಿದ್ದಾರೆ. ಬಂಧಿತನಿಂದ 145 ಗ್ರಾಂ ಚಿನ್ನಾಭರಣಗಳು, ಅಂದಾಜು ₹9 ಲಕ್ಷ ಮೌಲ್ಯದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.