Bengaluru: ವಾಣಿ ವಿಲಾಸ ಆಸ್ಪತ್ರೆಯಿಂದ ಶಿಶು ಅಪಹರಣ ಸುಖಾಂತ್ಯ: ಮಹಿಳೆ ಸೆರೆ
ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದ ಏಳು ದಿನಗಳ ನವಜಾತ ಗಂಡು ಶಿಶು ಅಪಹರಣ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿ.ವಿ.ಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು (ಏ.19): ಮೂರು ದಿನಗಳ ಹಿಂದೆ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದ ಏಳು ದಿನಗಳ ನವಜಾತ ಗಂಡು ಶಿಶು ಅಪಹರಣ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶ್ಸಸು ಕಂಡಿರುವ ವಿ.ವಿ.ಪುರ ಠಾಣೆ ಪೊಲೀಸರು, ಅಪಹೃತ ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದ್ದಾರೆ.
ಮಂಡ್ಯ ಜಿಲ್ಲೆಯ ದಿವ್ಯ ರಶ್ಮಿ(29) ಬಂಧಿತಳಾಗಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ಏಳು ದಿನಗಳ ನವಜಾತ ಗಂಡು ಮಗುವನ್ನು ಅಪಹರಿಸಿ ಶನಿವಾರ ಮುಂಜಾನೆ ಆರೋಪಿ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಮಿರ್ಜಾ ಆಲಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಸೋಮವಾರ ರಾತ್ರಿ ತಾಯಿ ಮಡಿಲಿಗೆ ಸೇರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಗು ಇಲ್ಲದ ಕಾರಣಕ್ಕೆ ಅಪಹರಣ: ಮಂಡ್ಯ ಜಿಲ್ಲೆಯ ರಶ್ಮಿ, ಬೆಂಗಳೂರಿನ ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆ ಕಾರ್ಮಿಕ ಸುನೀಲ್ ಜತೆ ಎರಡೇ ವಿವಾಹವಾಗಿದ್ದ ಆಕೆಗೆ ಸಂತಾನ ಭಾಗ್ಯವಿರಲಿಲ್ಲ. ಇದರಿಂದ ರಶ್ಮಿ ಖಿನ್ನತೆಗೆ ಒಳಗಾಗಿದ್ದಳು. ಕಳೆದ ತಿಂಗಳು ಗರ್ಭಪಾತವಾಗಿದ್ದರಿಂದ ಆಕೆಯ ನೋವು ಮತ್ತಷ್ಟು ಭಾದಿಸಿತು.
ಈ ನೋವಿನ ಹಿನ್ನೆಲೆಯಲ್ಲಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿಕೊಂಡು ಹೋಗಿ ತಾನು ಸಾಕಲು ಆಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ತಿಪಟೂರು ತಾಲೂಕಿನ ರೈತ ಪ್ರಸನ್ನ ಹಾಗೂ ಸುಮಾ ಅವರ ಮಗುವನ್ನು ಆಕೆ ಅಪಹರಿಸಿದ್ದಳು. ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಬಾಣಂತಿ ಹಾಗೂ ಮಗು ವೈದ್ಯಕೀಯ ಆರೈಕೆಯಲ್ಲಿದ್ದರು.
ಶನಿವಾರ ಮುಂಜಾನೆ 5 ಗಂಟೆಗೆ ಆಸ್ಪತ್ರೆ ಪ್ರವೇಶಿಸಿದ್ದ ಆರೋಪಿ, ಜನರಲ್ ವಾರ್ಡ್‌ನಲ್ಲಿ ತಾಯಿ, ಶುಶ್ರೂಷಕಿ ಹಾಗೂ ಭದ್ರತಾ ಕಾವಲುಗಾರ ನಿದ್ರೆಯಲ್ಲಿರುವುದನ್ನು ಗಮನಿಸಿ ಮಗುವನ್ನು ಅಪಹರಿಸಿಕೊಂಡು ಮಂಡ್ಯಕ್ಕೆ ಹೋಗಿದ್ದಳು. ಪೊಲೀಸರಿಗೆ ವಾಣಿ ವಿಲಾಸ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಮಗು ಎತ್ತಿಕೊಂಡು ಮಹಿಳೆ ಹೋಗುವ ದೃಶ್ಯ ಪತ್ತೆಯಾಯಿತು. ಈ ಸುಳಿವು ಆಧರಿಸಿ ಸುಮಾರು 500ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೊನೆಗೆ ಮಂಡ್ಯ ಜಿಲ್ಲೆಯಲ್ಲಿ ರಶ್ಮಿ ಮನೆ ಬಾಗಿಲಿಗೆ ಪೊಲೀಸರನ್ನು ಕರೆದೊಯ್ದು ನಿಲ್ಲಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ