- Home
- Sports
- Cricket
- WTC Final ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನ ಇಷ್ಟೊಂದಾ? ರನ್ನರ್-ಅಪ್‌ಗೆ ಸಿಗುವ ನಗದು ಬಹುಮಾನ ಎಷ್ಟು?
WTC Final ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನ ಇಷ್ಟೊಂದಾ? ರನ್ನರ್-ಅಪ್‌ಗೆ ಸಿಗುವ ನಗದು ಬಹುಮಾನ ಎಷ್ಟು?
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ನಾಲ್ಕನೇ ದಿನದಾಟದಲ್ಲಿಯೇ ಫಲಿತಾಂಶ ಹೊರಬೀಳುವುದು ದಟ್ಟವಾಗಿದೆ. ಚಾಂಪಿಯನ್ ತಂಡಕ್ಕೆ, ರನ್ನರ್ ಅಪ್ ತಂಡಕ್ಕೆ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯಿಂದ ಸಿಗುವ ನಗದು ಬಹುಮಾನವೆಷ್ಟು ನೋಡೋಣ

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯ ಸಾಗುತ್ತಿದೆ.
ಟೂರ್ನಿಯ ಮೊದಲೆರಡು ದಿನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತ್ತು. ಆದರೆ ಮೂರನೇ ದಿನ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಕಾಂಗರೂ ಪಡೆಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
ಗೆಲ್ಲಲು 282 ರನ್‌ಗಳ ಸ್ಪರ್ಧಾತ್ಮಕ ಗುರಿ ಪಡೆದ ಹರಿಣಗಳು ಸದ್ಯ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿದ್ದು, ಇನ್ನು ಕೇವಲ ಗೆಲ್ಲಲು 69 ರನ್‌ಗಳ ಅಗತ್ಯವಿದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ನಾಲ್ಕನೇ ದಿನವೇ ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಪವಾಡ ನಡೆದರಷ್ಟೇ ಕಾಂಗರೂ ಪಡೆ ಮತ್ತೊಮ್ಮೆ ಚಾಂಪಿಯನ್ ಆಗಲು ಸಾಧ್ಯ.
ಇನ್ನು ಟೆಸ್ಟ್ ವಿಶ್ವಕಪ್ ಗೆಲ್ಲುವ ತಂಡಕ್ಕೆ ಎಷ್ಟು ನಗದು ಬಹುಮಾನ ಸಿಗಬಹುದು ಎನ್ನುವ ಕುತೂಹಲ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅದಕ್ಕೆ ನಾವಿಂದು ಉತ್ತರ ಕೊಡುತ್ತೇವೆ ನೋಡಿ.
ಟೆಸ್ಟ್ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ 3.6 ಮಿಲಿಯನ್ ಅಮೆರಿಕನ್ ಡಾಲರ್(30.79 ಕೋಟಿ ರುಪಾಯಿ) ನಗದು ಬಹುಮಾನ ಸಿಗಲಿದೆ. ಇನ್ನು ರನ್ನರ್ ಅಪ್ ಸ್ಥಾನ ಪಡೆಯುವ ತಂಡವು 17.96 ಕೋಟಿ ರುಪಾಯಿ ತನ್ನದಾಗಿಸಿಕೊಳ್ಳಲಿದೆ.
ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಸೋಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶ ಕೈಚೆಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಟೀಂ ಇಂಡಿಯಾ, 12.31 ಕೋಟಿ ರುಪಾಯಿ ನಗದು ಬಹುಮಾನ ಪಡೆದುಕೊಂಡಿದೆ.
ನಾಲ್ಕನೇ ಸ್ಥಾನ ಪಡೆದ ನ್ಯೂಜಿಲೆಂಡ್(10.26 ಕೋಟಿ), ಐದನೇ ಸ್ಥಾನ ಪಡೆದ ಇಂಗ್ಲೆಂಡ್(8.20 ಕೋಟಿ ರುಪಾಯಿ), ಆರನೇ ಸ್ಥಾನ ಪಡೆದ ಶ್ರೀಲಂಕಾ(7.18 ಕೋಟಿ ರುಪಾಯಿ), ಏಳನೇ ಸ್ಥಾನ ಪಡೆದ ಬಾಂಗ್ಲಾದೇಶ 6.15 ಕೋಟಿ ರುಪಾಯಿ, 8ನೇ ಸ್ಥಾನ ಪಡೆದ ವೆಸ್ಟ್ ಇಂಡೀಸ್ 5.13 ಕೋಟಿ ರುಪಾಯಿ ಹಾಗೂ ಒಂಬತ್ತನೇ ಸ್ಥಾನ ಪಡೆದ ಪಾಕಿಸ್ತಾನ 4.10 ಕೋಟಿ ರುಪಾಯಿ ನಗದು ಬಹುಮಾನ ಪಡೆದಿದೆ