WPL ಪ್ಲೇ ಆಫ್‌ಗೂ ಮುನ್ನ ನಾಯಕಿ ಸ್ಮೃತಿ ಮಂಧನಾ ಬಗ್ಗೆ ಹೀಗ್ ಹೇಳೋದಾ ಪೆರ್ರಿ?
ಬೆಂಗಳೂರು(ಮಾ.15): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ನಾಕೌಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧನಾ ಬಗ್ಗೆ ಎಲೈಸಿ ಪೆರ್ರಿ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರನೇ ತಂಡವಾಗಿ ಈ ಬಾರಿ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್ ಭರ್ಜರಿ ಜಯ ಸಾಧಿಸಿ, ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿತು. ಎಲೈಸಿ ಪರ್ರಿ ಆಲ್ರೌಂಡ್ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮುಂಬೈ ಇಂಡಿಯನ್ಸ್ ಎದುರು ಎಲೈಸಿ ಪೆರ್ರಿ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರೆ, ಇನ್ನು ಬ್ಯಾಟಿಂಗ್‌ನಲ್ಲಿ ಅಜೇಯ 40 ರನ್ ಸಿಡಿಸಿ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದ್ದರು.
ಇದೀಗ ಆರ್‌ಸಿಬಿ ಆಲ್ರೌಂಡರ್ ಎಲೈಸಿ ಪೆರ್ರಿ, ತಮ್ಮ ತಂಡದ ನಾಯಕಿ ಸ್ಮೃತಿ ಮಂಧನಾ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು, ತಂಡದ ಅದ್ಭುತ ಪ್ರದರ್ಶನದ ಹಿಂದೆ ಸ್ಮೃತಿ ಮಂಧನಾ ಪಾತ್ರ ಮಹತ್ವವಾದದ್ದು ಎಂದು ಹೇಳಿದ್ದಾರೆ.
ಸ್ಮೃತಿ ಮಂಧನಾ ನಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಆಕೆಯ ಸ್ವಭಾವ ಒಂದು ರೀತಿ ಅಂತರ್ಮುಖಿಯ ರೀತಿಯದ್ದು. ಆದ್ದರಿಂದ ಆಕೆ ಎಲ್ಲಾ ಆಟಗಾರ್ತಿಯ ಜತೆ ದೊಡ್ಡ ಹೆಜ್ಜೆಯಿಟ್ಟಿದ್ದಾಳೆ. ಆಕೆಗೆ ನಾವೆಲ್ಲರೂ ಬೆಂಬಲ ನೀಡುತ್ತಾ ಬಂದಿದ್ದೇವೆ ಎಂದಿದ್ದಾರೆ.
ಹೀಗಾಗಿ ನಾವು ಮೈದಾನಕ್ಕಿಳಿದಾಗ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬೆಂಬಲಿಸಿಕೊಳ್ಳುತ್ತಾ ಬಂದಿದ್ದೇವೆ. ಇದು ನಮ್ಮ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದ್ದು, ಇದೇ ನಮ್ಮನ್ನು ಬೆಳೆಸುತ್ತಿದೆ ಎಂದು ಪೆರ್ರಿ ಹೇಳಿದ್ದಾರೆ.
ಇದೀಗ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಗೆದ್ದ ತಂಡ ಪ್ರಶಸ್ತಿಗಾಗಿ ಮಾರ್ಚ್ 17ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜತೆ ಕಾದಾಡಲಿದೆ.