T20 World Cup 2024: ಭಾರತಕ್ಕೆ ಈ ಫೈನಲ್ ಅತ್ಯಂತ ಮಹತ್ವದ್ದು ಯಾಕೆ ಗೊತ್ತಾ?
ಬಾರ್ಬಡಾಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪ್ರಶಸ್ತಿಗಾಗಿಂದು ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಷ್ಟಕ್ಕೂ ಈ ಟಿ20 ವಿಶ್ವಕಪ್ ಟ್ರೋಫಿ ಟೀಂ ಇಂಡಿಯಾಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಅದು ಯಾಕೆ ಅಂತ ಈ ಸ್ಟೋರಿ ನೋಡಿ.
* 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ
2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಟಿ20 ಟ್ರೋಫಿ ಜಯಿಸಿತ್ತು. ಇದಾದ ಬಳಿಕ 7 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಚುಟುಕು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಭಾರತ ಟಿ20 ವಿಶ್ವಕಪ್ ಗೆಲ್ಲಬೇಕಿದೆ.
* 2011ರ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ ಟೀ ಇಂಡಿಯಾ..!
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ ಭಾರತಕ್ಕೆ ವಿಶ್ವಕಪ್ ಎತ್ತಿಹಿಡಿಯುವ ಭಾಗ್ಯ ಒಲಿದಿಲ್ಲ. ಈ ಕಾರಣಕ್ಕಾಗಿ ಭಾರತ ಇಂದು ವಿಶ್ವಕಪ್ ಗೆಲ್ಲಬೇಕಿದೆ
* 2013ರ ಚಾಂಪಿಯನ್ಸ್ ಟ್ರೋಫಿ, ಭಾರತ ಗೆದ್ದ ಕೊನೆಯ ಐಸಿಸಿ ಟ್ರೋಫಿ.!
ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿದ್ದು 2013ರಲ್ಲಿ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಇಂಗ್ಲೆಂಡ್ ಮಣಿಸಿ ಕಪ್ ಗೆದ್ದಿತ್ತು. ಇದಾಗಿ ಒಂದು ದಶಕದ ಬಳಿಕ ಐಸಿಸಿ ಟ್ರೋಫಿ ಜಯಿಸುವ ಸುವರ್ಣಾವಕಾಶ ಭಾರತದ ಎದುರಿಗಿದೆ.
* 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದ ಭಾರತ, 2016, 2022ರ ಸೆಮೀಸ್‌ನಲ್ಲಿ ನಿರಾಸೆ
ಟೀಂ ಇಂಡಿಯಾ ಬರೋಬ್ಬರಿ ಒಂದು ದಶಕದ ಹಿಂದೆ ಅಂದರೆ 2014ರಲ್ಲಿ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಲಂಕಾ ಎದುರು ಮುಗ್ಗರಿಸಿತ್ತು. ಇನ್ನು 2016 ಹಾಗೂ 2022ರಲ್ಲಿ ಸೆಮೀಸ್‌ನಲ್ಲೇ ಭಾರತದ ಹೋರಾಟ ಅಂತ್ಯವಾಗಿತ್ತು.
* 2015, 2019ರ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಸೋತಿದ್ದ ತಂಡಕ್ಕೆ 2023ರ ವಿಶ್ವಕಪ್ ಫೈನಲಲ್ಲಿ ಆಘಾತ
ಇನ್ನು ಟೀಂ ಇಂಡಿಯಾ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಇನ್ನು ಕಳೆದ ವರ್ಷದ ಕೊನೆಯಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್‌ಗೆ ಶರಣಾಗಿ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು.
* 7 ತಿಂಗಳಲ್ಲಿ ಭಾರತಕ್ಕೆ ವಿಶ್ವಕಪ್ ಫೈನಲ್ ಸೋಲಿನ ಕಹಿ ಮರೆಯುವ ಅವಕಾಶ
2023ರ ನವೆಂಬರ್ 19ರಂದು ಅಂದರೆ ಬರೋಬ್ಬರಿ 7 ತಿಂಗಳ ಹಿಂದೆ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿದ್ದ ಭಾರತ, ಈಗ ಶತಾಯಗತಾಯ ಐಸಿಸಿ ಟ್ರೋಫಿ ಗೆಲ್ಲಲೇಬೇಕೆಂದು ಸಜ್ಜಾಗಿದೆ.