ಫಿಟ್ ಆಗಿರುವ ಶಮಿಗೆ ಭಾರತ ತಂಡದಲ್ಲಿ ಯಾಕೆ ಚಾನ್ಸ್ ಸಿಕ್ತಿಲ್ಲ! ಕೊನೆಗೂ ಬಯಲಾಯ್ತು ರಿಯಲ್ ಕಾರಣ!
ನವದೆಹಲಿ: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶಮಿ ಸಂಪೂರ್ಣ ಫಿಟ್ ಆಗಿದ್ದರೂ, ಭಾರತ ತಂಡದಿಂದ ಅವರನ್ನು ಹೊರಗಿಟ್ಟಿರುವುದೇಕೆ ಎನ್ನುವ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ರಣಜಿ ಟ್ರೋಫಿಯಲ್ಲಿ ಮಿಂಚುತ್ತಿರುವ ಶಮಿ
ಹಾಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ 93 ಓವರ್ ಯಾವುದೇ ಅಳುಕಿಲ್ಲದೇ ಬೌಲಿಂಗ್ ಮಾಡಿದರೂ, ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ.
2025ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಭಾರತ ಪ್ರತಿನಿಧಿಸಿದ್ದ ಶಮಿ
ಭಾರತ ತಂಡದ ವೇಗಿ ಶಮಿ, 2025ರ ಮಾರ್ಚ್ ತಿಂಗಳಿನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಶಮಿ ಡ್ರಾಪ್ ಬಗ್ಗೆ ಅಚ್ಚರಿ
ಐಸಿಸಿ ಟೂರ್ನಿಗಳಲ್ಲಿ ಭಾರತದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಶಮಿ, ಸದ್ಯ ಸಂಪೂರ್ಣ ಫಿಟ್ ಆಗಿದ್ದರೂ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಬಗ್ಗೆ ಕ್ರಿಕೆಟ್ ಫ್ಯಾನ್ಸ್ ಹಾಗೂ ಕೆಲವು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶಮಿ ಬೆನ್ನಿಗೆ ನಿಂತ ಸೌರವ್ ಗಂಗೂಲಿ
ಶಮಿ ಒಬ್ಬ ಅಸಾಮಾನ್ಯ ಬೌಲರ್ ಎಂಬುದು ಎಲ್ಲರಿಗೂ ತಿಳಿದಿದೆ. ಕಳೆದ ಎರಡು-ಮೂರು ರಣಜಿ ಪಂದ್ಯಗಳಲ್ಲಿ ಬಂಗಾಳವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ಅವರ ಫಾರ್ಮ್ ಮತ್ತು ಫಿಟ್‌ನೆಸ್ ನೋಡಿದರೆ, ಶಮಿಯನ್ನು ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಿಂದ ಹೊರಗಿಡಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಶಮಿ ಆಯ್ಕೆಯಾಗದೇ ಇರುವುದರ ಹಿಂದಿನ ಸೀಕ್ರೇಟ್
ಶಮಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡಕ್ಕೆ ಅವರನ್ನು ಆಯ್ಕೆ ಸಮಿತಿ ಪರಿಗಣಿಸುತ್ತಿಲ್ಲ ಎನ್ನುವ ವಿಚಾರವಾಗಿ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ಇಂಗ್ಲೆಂಡ್‌ನಲ್ಲಿ ಭಾರತ ‘ಎ’ ಪರ ಪಂದ್ಯ ಆಡಲು ನಿರಾಕರಿಸಿದ್ದೇ ಶಮಿ ತಂಡದಿಂದ ಹೊರಗುಳಿಯಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಶಮಿ ಫಿಟ್ನೆಸ್ ತಿಳಿಯಲು ಮುಂದಾಗಿದ್ದ ಬಿಸಿಸಿಐ
ವರದಿಯ ಪ್ರಕಾರ, ಜೂನ್-ಆಗಸ್ಟ್‌ನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ, ಆಯ್ಕೆ ಸಮಿತಿಯ ಹಿರಿಯ ಸದಸ್ಯರೊಬ್ಬರು ಶಮಿಗೆ ಹಲವು ಸಂದೇಶ ಕಳುಹಿಸಿ ಫಿಟ್ನೆಸ್ ಬಗ್ಗೆ ವಿಚಾರಿಸಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ಪರ 2 ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯ ಆಡುವಂತೆ ಸೂಚಿಸಿದ್ದರು. ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲು ಸಂಪೂರ್ಣ ಫಿಟ್ ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು
ಶಮಿ ಮೇಲೆ ಬಿಸಿಸಿಐ ಅಸಮಾಧಾನ
ಆದರೆ ಶಮಿ ತಮ್ಮ ಕಾರ್ಯದೊತ್ತಡ ನಿರ್ವಹಣೆ ಮುಂದಿಟ್ಟು ತಮ್ಮನ್ನು ಸರಣಿಗೆ ಪರಿಗಣಿಸಬಾರದು ಎಂದು ಆಯ್ಕೆ ಸಮಿತಿಗೆ ಹೇಳಿದ್ದರು ಎಂದು ತಿಳಿದುಬಂದಿದೆ. ಇದರಿಂದ ಅಸಮಾಧಾನಗೊಂಡ ಬಿಸಿಸಿಐ, ಸದ್ಯ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎನ್ನಲಾಗಿದೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಶಮಿ ಅದ್ಭುತ ಪ್ರದರ್ಶನ
ಸದ್ಯ 2025-26ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಬಂಗಾಳ ಪರ 3 ರಣಜಿ ಪಂದ್ಯಗಳನ್ನಾಡಿ 93 ಓವರ್ ಬೌಲಿಂಗ್ ಮಾಡಿ 15 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ಜತೆಗೆ ತಾವು ಭಾರತ ತಂಡ ಸೇರಲು ಸಂಪೂರ್ಣ ಫಿಟ್ ಆಗಿರುವ ಸಂದೇಶವನ್ನು ರವಾನಿಸಿದ್ದರು.