ಮೆಲ್ಬರ್ನ್‌ನಲ್ಲೇ ಏಕೆ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜಿಸುತ್ತಾರೆ? ಏನಿದರ ಸ್ಪೆಷಾಲಿಟಿ?
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡಿಸೆಂಬರ್ 26ರಿಂದ ಆರಂಭವಾಗಲಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯುತ್ತಾರೆ. ಅಷ್ಟಕ್ಕೂ ಈ ಬಾಕ್ಸಿಂಗ್ ಡೇ ಟೆಸ್ಟ್‌ಗೂ, ಎಂಸಿಜಿ ಮೈದಾನಕ್ಕೂ ಇರುವ ನಂಟೇನು ನೋಡೋಣ ಬನ್ನಿ.
ವರ್ಷಾಂತ್ಯದ ಕೊನೆಯ ಟೆಸ್ಟ್ ಪಂದ್ಯ ಎಂದೇ ಕರೆಸಿಕೊಳ್ಳುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭಕ್ಕೆ ಮತ್ತೊಮ್ಮೆ ಕ್ಷಣಗಣನೆ ಶುರುವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಡಿಸೆಂಬರ್ 26ರಂದು ಎಂಸಿಜಿ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿವೆ.
ಪ್ರತಿ ವರ್ಷವೂ ಎರಡು ಪ್ರಮುಖ ಕ್ರಿಕೆಟ್ ಮಂಡಳಿಗಳಾದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳು ಡಿಸೆಂಬರ್ 26ರ ಮಹತ್ವದ ದಿನದಂದೇ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಾ ಬಂದಿವೆ. ಡಿಸೆಂಬರ್ 26ರಿಂದ ಆರಂಭವಾಗಲಿರುವ ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದೇ ಕರೆಯಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿವೆ. ಮೆಲ್ಬರ್ನ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಲಿವೆ. ಅದೇ ರೀತಿ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಲಿದೆ.
ಅಷ್ಟಕ್ಕೂ ಈ ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೆ ಏನು? ಬಾಕ್ಸಿಂಗ್ ಡೇ ಟೆಸ್ಟ್‌ಗೆ ಯಾಕಿಷ್ಟು ಮಹತ್ವ ನೀಡಲಾಗುತ್ತೆ ಎನ್ನುವುದನ್ನು ನೋಡುವುದಾದರೇ, ಬಾಕ್ಸಿಂಗ್ ಡೇ ಅಂದ್ರೆ ಇದು ಮುಷ್ಠಿ ಕಾಳಗವಲ್ಲ ಎನ್ನುವುದು ಮೊದಲು ನಿಮ್ಮ ಗಮನದಲ್ಲಿರಲಿ.
ಪ್ರತಿವರ್ಷದ ಕ್ರಿಸ್ಮಸ್ ಮರುದಿನ ಆರಂಭವಾಗಲಿರುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯುತ್ತಾರೆ. ಕ್ರಿಸ್ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್ ನೀಡುತ್ತಾರೆ. ಮರುದಿನ ಅಂದರೆ ಡಿಸೆಂಬರ್ 26ರಂದು ಆ ಬಾಕ್ಸ್ ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎನ್ನಲಾಗುತ್ತದೆ. ಆ ದಿನದಂದೇ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂಬ ಹೆಸರು ಬಂದಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ಗಿದೆ ಶತಮಾನದ ಇತಿಹಾಸ:
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಶತಮಾನದ ಇತಿಹಾಸವಿದೆ. 1892ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಿಸ್ಮಸ್ ಸಮಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಯಿತು. ಆ ಸಮಯದಲ್ಲಿ ವಿಕ್ಟೋರಿಯಾ ಹಾಗೂ ನ್ಯೂ ಸೌಥ್ ವೇಲ್ಸ್ ತಂಡಗಳ ನಡುವೆ ಪಂದ್ಯ ಆಯೋಜನೆ ಒಂದು ರೀತಿ ಸಂಪ್ರದಾಯವಾಯಿತು.
ಇನ್ನು ಇದಾದ ಬಳಿಕ 1950ರಲ್ಲಿ ಎಂಸಿಜಿ ಮೈದಾನದಲ್ಲೇ ಕ್ರಿಸ್ಮಸ್‌ಗೆ ಅನುಗುಣವಾಗಿ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆ ಟೆಸ್ಟ್ ಪಂದ್ಯವು ಡಿಸೆಂಬರ್ 22ಕ್ಕೆ ಆರಂಭವಾಗಿ ಡಿಸೆಂಬರ್ 26ಕ್ಕೆ ಮುಗಿಯಿತು. ಅಲ್ಲಿಂದ ಡಿಸೆಂಬರ್ 26ಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದಿನಾಂಕ ಅಧಿಕೃತವಾಗಿ ನಿಗದಿಯಾಯಿತು.
ಅಲ್ಲಿಂದೀಚೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಿಸುವುದು ವಾಡಿಕೆಯಾಗಿದೆ. ಅದರಂತೆ ಇದೀಗ ಡಿಸೆಂಬರ್ 26ರಂದು ಭಾರತ ಹಾಗೂ ಆಸೀಸ್ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿವೆ.